LATEST NEWS
ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿನ ಸಮಸ್ಯೆಗೆ ಕ್ರಮ – ಜಿಲ್ಲಾಧಿಕಾರಿ
ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿನ ಸಮಸ್ಯೆಗೆ ಕ್ರಮ – ಜಿಲ್ಲಾಧಿಕಾರಿ
ಉಡುಪಿ, ಡಿಸೆಂಬರ್ 4 : ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿ ನಡೆಯುವ ಮಹಿಳೆಯರ ಮತ್ತು ಮಕ್ಕಳ ಗ್ರಾಮ ಸಭೆಗಳಲ್ಲಿ , ಮಹಿಳೆಯರು ಮತ್ತು ಮಕ್ಕಳಿಂದ ವ್ಯಕ್ತವಾಗುವ ಸಮಸ್ಯೆಗಳು ಮತ್ತು ದಾಖಲಾಗುವ ದೂರುಗಳ ಬಗ್ಗೆ ಇದುವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.
ಅವರು ಮಂಗಳವಾರ, ರಜತಾದ್ರಿಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ , ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ನಡೆಯುವ ಮಹಿಳೆಯರ ಮತ್ತು ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ವ್ಯಕ್ತವಾಗುವ ದೂರುಗಳನ್ನು ದಾಖಲಿಸಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಮತ್ತು 2017-18 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದಿರುವ ಗ್ರಾಮ ಸಭೆಗಳಲ್ಲಿ ದಾಖಲಿಸಿರುವ ದೂರುಗಳ ಕುರಿತು ಪ್ರತ್ಯೇಕ ಸಭೆ ನಿಗಧಿಪಡಿಸಿ , ಈ ದೂರುಗಳನ್ನು ಇತ್ಯರ್ಥಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮಹಿಳೆ ಮತ್ತು ಮಕ್ಕಳ ಗ್ರಾಮ ಸಭೆ ನಡೆಯುವ ಕುರಿತಂತೆ ಜಿಲ್ಲೆಯ ಎಲ್ಲಾ ಮಹಿಳಾ ಸಾಂತ್ವನ ಕೇಂದ್ರಗಳಿಗೆ ಮಾಹಿತಿ ನೀಡುವಂತೆ ಎಲ್ಲಾ ತಾಲೂಕುಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರಲ್ಲದೇ, ಸಾಂತ್ವನ ಕೇಂದ್ರಗಳ ಸಿಬ್ಬಂದಿ ಈ ಸಭೆಗಳಲ್ಲಿ ಭಾಗವಹಿಸಿ ಇಲಾಖೆಯ ಎಲ್ಲಾ ಮಾಹಿತಿಗಳನ್ನು ಹಾಗೂ ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ಸಹಾಯವಾಣಿಯ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿನ ಪ್ರೌಢಶಾಲೆಯಲ್ಲಿನ ಮಕ್ಕಳಿಗೆ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಇಲಾಖೆಯಲ್ಲಿನ ಸ್ನೇಹ ಕ್ಲಿನಿಕ್ ನ ಮೂಲಕ ಹದಿಹರೆಯದ ಸಮಸ್ಯೆಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ ಏರ್ಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದ ಜಿಲ್ಲಾಧಿಕಾರಿ, ಭಿಕ್ಷಾಟನೆಯಲ್ಲಿ ತೊಡಗಿರುವ ಮಹಿಳೆಯರು ಮತ್ತು ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ಅವರ ವಾಸಿಸುವ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.
ಸಮಾಜದಲ್ಲಿ ಇತ್ತೀಚೆಗೆ ವೈವಾಹಿಕ ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡುಬರುತ್ತಿದ್ದು ಈ ಬಗ್ಗೆ ಸಾಂತ್ವನ ಕೇಂದ್ರದ ಮೂಲಕ ಮಹಿಳಾ ಕಾಲೇಜುಗಳಲ್ಲಿ ಪ್ರಿ ಮ್ಯಾರೇಜ್ ಕೌನ್ಸಿಲಿಂಗ್ ಏರ್ಪಡಿಸುವ ಕುರಿತಂತೆ , ಸಾಂತ್ವನ ಕೇಂದ್ರದ ಸಿಬ್ಬಂದಿಗೆ ತರಬೇತಿ ನೀಡಿ, ವೇಳಾಪಟ್ಟಿ ನಿಗಧಿಪಡಿಸಿಕೊಂಡು ಮಹಿಳಾ ಕಾಲೇಜುಗಳಲ್ಲಿ ಕಾರ್ಯಕ್ರಮ ಏರ್ಪಡಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಜುಲೈ 18 ರಿಂದ ಅಕ್ಟೋಬರ್ 18 ರ ವರೆಗೆ ಸಾಂತ್ವನ ಕೇಂದ್ರಗಳಲ್ಲಿ , ಉಡುಪಿಯಲ್ಲಿ 40, ಕಾರ್ಕಳದಲ್ಲಿ 34 ಹಾಗೂ ಕುಂದಾಪುರದಲ್ಲಿ 34 ಪ್ರಕರಣಗಳನ್ನು ದಾಖಲಿಸಲಾಗಿದೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ 4 ಪ್ರಕರಣ ದಾಖಲಾಗಿದೆ, ವರದಕ್ಷಿಣೆ ನಿಷೇಧ ಕಾಯ್ದೆಯಡಿ 7 ಪ್ರಕರಣ ದಾಖಲಿಸಲಾಗಿದೆ, ಮಾದಕ ವಸ್ತು ನಿಷೇಧ ಕುರಿತಂತೆ ಪೊಲೀಸ್ ಇಲಾಖೆವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ , ಬಾಲ್ಯ ವಿವಾಹ ನಿಷೇಧ ಕುರಿತಂತೆ ವಿವಿಧ ಧಾರ್ಮಿಕ ಮುಖಂಡರಿಗೆ, ಸಂಘಟಕರಿಗೆ, ಕಲ್ಯಾಣಮಂಟಪಗಳ ಮಾಲೀಕರಿಗೆ, ಪ್ರಿಂಟಿಂಗ್ ಪ್ರೆಸ್ ನವರಿಗೆ ಅರಿವು ಕಾರ್ಯಗಾರವನ್ನು ಆಯೋಜಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮಾಹಿತಿ ನೀಡಿದರು.