Connect with us

    National

    ಕೆಂಬಣ್ಣಕ್ಕೆ ತಿರುಗಿದ ಲೋನಾರ್ ಸರೋವರದ ನೀರು !!  

    ಅನಿರೀಕ್ಷಿತ ಪ್ರಾಕೃತಿಕ ಬದಲಾವಣೆಗೆ ಏನು ಕಾರಣ ?

    ಮುಂಬೈ, ಜೂನ್ 11: ವಿಶ್ವವಿಖ್ಯಾತ ಪ್ರವಾಸಿ ತಾಣ ಮಹಾರಾಷ್ಟ್ರದ ಲೋನಾರ್ ಸರೋವರದ ನೀರು ದಿಢೀರ್ ಆಗಿ ಕೆಂಬಣ್ಣಕ್ಕೆ ತಿರುಗಿದೆ. ನಿಸರ್ಗ ರಮಣೀಯ ಎನ್ನಲಾಗ್ತಿರುವ ಈ ವಿದ್ಯಮಾನ ವಿಶ್ವದ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

    ಮುಂಬೈನಿಂದ 500 ಕಿಮೀ ದೂರದಲ್ಲಿರುವ ಬುಲ್ದಾನಾ ಜಿಲ್ಲೆಯಲ್ಲಿರುವ ಲೋನಾರ್ ಸರೋವರ ಪ್ರಸಿದ್ಧಿ ಪಡೆದಿರುವ ಅಜಂತಾ ಎಲ್ಲೋರ ಗುಹಾಂತರ ದೇವಾಲಯದ ಸಮೀಪದಲ್ಲೇ ಇದೆ. ಪ್ರತಿವರ್ಷ ಲೋನಾರ್ ಸರೋವರ ನೋಡಲು ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಎರಡು ಕಿ.ಮೀ ವ್ಯಾಸ ಇರುವ ಈ ಸರೋವರದಲ್ಲಿ ಈಗ ನೀರಿನ ಬಣ್ಣ ತಿಳಿ ಕೆಂಪು ಬಣ್ಣಕ್ಕೆ ತಿರುಗಿದೆ. ಹೀಗಾಗಿ ಜೀವಶಾಸ್ತ್ರಜ್ಞರು ಮತ್ತು ನಿಸರ್ಗ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಸ್ಥಳೀಯ ತಜ್ಞರ ಪ್ರಕಾರ, ಈ ಸರೋವರದ ನೀರು ಹೀಗೆ ಕೆಂಬಣ್ಣಕ್ಕೆ ತಿರುಗುವುದು ಇದು ಮೊದಲೇನಲ್ಲ. ಈ ಬಾರಿ ಮಾತ್ರ ಗಮನಸೆಳೆಯುವ ರೀತಿ ಬಣ್ಣ ಕಂಡುಬಂದಿದೆ ಎನ್ನುತ್ತಾರೆ.

    ಲೋನಾರ್ ಸರೋವರ ರಕ್ಷಣಾ ಮತ್ತು ಅಭಿವೃದ್ಧಿ ಸಮಿತಿಯ ಗಜಾನನ್ ಖಾರಟ್ ಪ್ರಕಾರ, ಸರೋವರದ ನೀರಿನ ಮೇಲ್ಮೈಯಲ್ಲಿ ಪಾಚಿಗಟ್ಟಿದ ರೀತಿ ಇದೆ. ನೀರಿನ ಲವಣಾಂಶ ಮತ್ತು ಈ ಪಾಚಿ ಸಮ್ಮಿಳಿತವಾಗಿ ಇಂಥ ಬಣ್ಣ ಬಂದಿದೆ ಎಂದು ಹೇಳುತ್ತಾರೆ. ನೀರಿನ ಮೇಲ್ಮೈಗಿಂತ 5 ಮೀಟರ್ ಒಳಗೆ ನೀರಿನಲ್ಲಿ ಆಮ್ಲಜನಕ ಇರುವುದಿಲ್ಲ. ಇರಾನ್ ದೇಶದಲ್ಲಿರುವ ಸರೋವರದಲ್ಲಿಯೂ ಹೀಗೆ ನೀರಿನ ಬಣ್ಣ ಕೆಂಪಗಿದೆ. ನೀರಿನಲ್ಲಿ ಲವಣಾಂಶ ಹೆಚ್ಚಿರುವುದು ಈ ರೀತಿಯ ಕೆಂಬಣ್ಣಕ್ಕೆ ಕಾರಣ ಎನ್ನುತ್ತಾರೆ.

    ಔರಂಗಾಬಾದಿನ ಜೀಯೋಲಜಿಸ್ಟ್ ಡಾ.ಮದನ್ ಸೂರ್ಯವಂಶಿ ಪ್ರಕಾರ, ಸಾಧಾರಣವಾಗಿ ಸರೋವರದ ನೀರು ತಿಳಿ ಹಸುರು ಬಣ್ಣ ಹೊಂದಿರುತ್ತದೆ. ಕೋನಾರ್ ಸರೋವರದ ನೀರು ಬಣ್ಣ ಬದಲಾಯಿಸಿದ್ದು ನೋಡಿದರೆ ಏನೋ ಪ್ರಾಕೃತಿಕ ಬದಲಾವಣೆ ಎಂದು ತೋರುತ್ತದೆ ಎಂದಿದ್ದಾರೆ. ಲಾಕ್ ಡೌನ್ ಕಾಲದಲ್ಲಿ ಜನರು ಸರೋವರದತ್ತ ಸುಳಿದಿಲ್ಲ. ಯಾವುದೇ ಜನರ ಹಸ್ತಕ್ಷೇಪ ಇರದಿದ್ದುದು ಇಂಥ ಬದಲಾವಣೆಗೆ ಕಾರಣ ಇರಬಹುದು ಎಂದು ಹೇಳಿದ್ದಾರೆ.

    ಅಂದಹಾಗೆ, ಈ ಸರೋವರ ಸುಮಾರು 50 ಸಾವಿರ ವರ್ಷಗಳ ಹಿಂದೆ ಉಲ್ಕಾಪಾತದಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗುತ್ತಿದೆ. 80 ಸಾವಿರ ಕಿಮೀ ವೇಗದಲ್ಲಿ ಉಲ್ಕಾಪಾತ ಆದ ಕಾರಣ ಶಿಲಾಪದರವಾಗಿದ್ದ ಈ ಪ್ರದೇಶದ ಎರಡು ಕಿಮೀ ವ್ಯಾಪ್ತಿ ಆಳಕ್ಕೆ ಹೋಗಿದೆ. ಆನಂತ್ರ ಇದೇ ಆಳ ಪ್ರದೇಶ ಸರೋವರವಾಗಿ ರೂಪಾಂತರಗೊಂಡಿದೆ ಎನ್ನಲಾಗುತ್ತಿದೆ. ಅಲ್ಲದೆ, ಈ ಪ್ರದೇಶದಲ್ಲಿ ಮಳೆ ಅತ್ಯಂತ ಕಡಿಮೆ ಆಗಿರುವ ಕಾರಣ ಸರೋವರಕ್ಕೆ ಇತರೇ ನೀರು ಸೇರುವುದಿಲ್ಲ. ಹೀಗಾಗಿ ಸರೋವರದ ಬಣ್ಣ ಆಗಿಂದಾಗ್ಗೆ ಬದಲಾಗುತ್ತಿರುವುದಲ್ಲದೆ, ಜನರ ಕುತೂಹಲಕ್ಕೆ ಕಾರಣವಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply