BANTWAL
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಎಲ್ ಪಿಜಿ ಟ್ಯಾಂಕರ್
ಬಂಟ್ವಾಳ ಫೆಬ್ರವರಿ 2: ಬೆಂಗಳೂರಿಗೆ ಅನಿಲ ಸಾಗಿಸುತ್ತಿದ್ದ ಎಲ್‌ಪಿಜಿ ಟ್ಯಾಂಕರ್ ಒಂದು ಬಂಟ್ವಾಳ ತಾಲೂಕಿನ ಸೂರಿಕುಮೇರ್ ಮಸೀದಿಯ ಮುಂದೆ ಪಲ್ಟಿಯಾಗಿದ್ದು ಅದೃಷ್ಟವಶಾತ್ ಈವರೆಗೆ ಟ್ಯಾಂಕರ್‌ನಲ್ಲಿ ಎಲ್‌ಪಿಜಿ ಅನಿಲ ಸೋರಿಕೆಯಾಗಿಲ್ಲ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆಯೇ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದೆ. ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ.
ಅದೃಷ್ಟವಶಾತ್ ಗ್ಯಾಸ್ ಅನಿಲ ಸೋರಿಕೆಯಾಗಿಲ್ಲ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮನೆಗಳಲ್ಲಿ ಬೆಂಕಿ ಬಳಸದಂತೆ ಮೈಕ್ ನಲ್ಲಿ ಸೂಚನೆ ನೀಡಲಾಯಿತು. ಬಳಿಕ ಎಂಆರ್ ಪಿಎಲ್ ನಿಂದ ಪರಿಣಿತರ ತಂಡ ಆಗಮಿಸಿ ಟ್ಯಾಂಕರ್ ಸ್ಥಳಾಂತರ ಮಾಡಲಾಗಿದೆ.
ಮಂಗಳೂರು ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ವಾಹನ ಸಂಚಾರವನ್ನು ನಿಯಂತ್ರಿಸಲು ಸ್ಥಳೀಯರು ಮುಂದಾಗಿದ್ದಾರೆ. ಮಂಗಳೂರಿನಿಂದ ಬರುವ ವಾಹನಗಳನ್ನು ಕಲ್ಲಡ್ಕ, ವಿಟ್ಲ ರಸ್ತೆ ಮೂಲಕ ಹೋಗಬೇಕಿದ್ದು, ಉಪ್ಪಿನಂಗಡಿಯಿಂದ ಆಗಮಿಸುವವರನ್ನು ಮಾಣಿ, ಬುಡೋಳಿ, ಕಬಕ ರಸ್ತೆ ಮೂಲಕ ಸಾಗಬೇಕಿದೆ. ವಿಟ್ಲ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.