DAKSHINA KANNADA
ಮೂಗಿ ಬಾಲಕಿಯ ಅತ್ಯಾಚಾರ ಯತ್ನ ಆರೋಪಿಯ ಬಂಧನ
ಉಳ್ಳಾಲ, ಫೆಬ್ರವರಿ 01: ನಗರದ ಕೊಣಾಜೆ ಠಾಣಾ ವ್ಯಾಪ್ತಿಯ ಕೈರಂಗಳ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಅಂಗವಿಕಲ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ, ಆರೋಪಿಯಾದ ಹೂಹಾಕುವಕಲ್ಲು ಕುಕ್ಕುದಕಟ್ಟೆ ನಿವಾಸಿ ಸಿದ್ದೀಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪ್ರತಿದಿನ ಬಾಲಕಿಯ ಮನೆ ಸಮೀಪವಿರುವ ಮೈದಾನಕ್ಕೆ ಕ್ರಿಕೆಟ್ ಆಡಲು ಬರುತ್ತಿದ್ದು, ಈ ಸಂದರ್ಭ ಮೂಗಿ ಬಾಲಕಿ ಮನೆ ಬಳಿ ಕುಳಿತು ಆಟ ವೀಕ್ಷಿಸುತ್ತಿದ್ದಳು. ಬಾಲಕಿಯ ಅಸಹಾಯಕತೆ ಅರಿತ ಆರೋಪಿ ಭಾನುವಾರ ಮಧ್ಯಾಹ್ನ ಆಕೆಯ ತಾಯಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಹೆದರಿದ ಬಾಲಕಿ ಬೊಬ್ಬೆ ಹಾಕುತ್ತ ಓಡಿ ಹೋಗಿ ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ವಿಷಯ ತಾಯಿಗೆ ಗೊತ್ತಾಗಿ ಬಾಲಕಿಯ ದೊಡ್ಡಪ್ಪನಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಾಗ ಸಲೂನ್‌ನಲ್ಲಿದ್ದ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಬೆನ್ನಟ್ಟಿ ಸೆರೆ ಹಿಡಿದಿದ್ದಾರೆ.