LATEST NEWS
ವಕೀಲ ಕೆಎಸ್ಎನ್ ರಾಜೇಶ್ ಭಟ್ ಪತ್ತೆಗೆ ಲುಕ್ಔಟ್ ನೋಟೀಸ್

ಮಂಗಳೂರು ನವೆಂಬರ್ 09: ಕಾನೂನು ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಪತ್ತೆಗಾಗಿ ಮಂಗಳೂರು ಪೊಲೀಸರು ದೇಶಾದ್ಯಂತ ಲುಕ್‌ಔಟ್ ನೋಟೀಸು ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ತನ್ನ ಆಫೀಸ್ ಗೆ ಇಂಟರ್ನಿಯಾಗಿ ಬಂದಿದ್ದ ಖಾಸಗಿ ಕಾನೂನು ಕಾಲೇಜಿನ ವಿಧ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ವಕೀಲ ಕೆಎಸ್ಎನ್ ರಾಜೇಶ್ ಭಟ್ ಆರೋಪಿಯಾಗಿದ್ದು, ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅವರು ನಗರ ಬಿಟ್ಟು ಪರಾರಿಯಾಗಿದ್ದಾರೆ.
ಆರೋಪಿ ವಕೀಲ ರಾಜೇಶ್ ಭಟ್ ಯಾವುದೇ ಒಂದು ಜಾಗದಲ್ಲಿರದೆ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿರುವುದು ಮಾತ್ರವಲ್ಲದೆ, ತನ್ನ ಮೊಬೈಲ್ ಸಿಮ್ ಕೂಡಾ ಆಗಾಗ್ಗೆ ಬದಲಾಯಿಸುತ್ತಿರುವ ಬಗ್ಗೆ ಪೊಲೀಸರು ಅನುಮಾನಗೊಂಡಿದ್ದು, ಆತನನ್ನು ಪತ್ತೆಹಚ್ಚುವ ಪ್ರಕ್ರಿಯೆಗೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಈ ಲುಕ್‌ಔಟ್ ನೋಟೀಸು ಮೂಲಕ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.

ಈ ಹಿನ್ನಲೆ ದೇಶದ ಎಲ್ಲ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಪೊಲೀಸ್ ಠಾಣೆಗಳಿಗೆ ಲುಕ್‌ಔಟ್ ನೋಟೀಸು ನೀಡಲಾಗುವುದು. ಆರೋಪಿ ಕಂಡುಬಂದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ತಿಳಿಸುಂತೆ ಹೇಳಿ ನೋಟೀಸನ್ನು ಬಸ್ ನಿಲ್ದಾಣ, ಹೊಟೇಲ್, ಪೊಲೀಸ್ ಠಾಣೆ ಆಸುಪಾಸಿನಲ್ಲಿ ಅಂಟಿಸುವ ಪ್ರಕ್ರಿಯೆಗೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನಿರ್ದೇಶನ ನೀಡಲು ಮುಂದಾಗಿದ್ದಾರೆ.
ಇನ್ನು ಇದಲ್ಲದೆ ವಕೀಲ ರಾಜೇಶ್ ಭಟ್ ಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಕೂಡಾ ಸೀಝ್ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ತನ್ನ ಪ್ರಭಾವವನ್ನು ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ಲುಕ್‌ಔಟ್ ನೋಟೀಸು ಜಾರಿ ಮಾಡಲಾಗುತ್ತದೆ.