LATEST NEWS
ಮಂಗಳೂರು – 50 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮೂವರು

ಮಂಗಳೂರು ಮೇ 28: ಮನೆ ನಿರ್ಮಾಣಕ್ಕೆ ಜಾಗದಲ್ಲಿರುವ ಕಲ್ಲು ತೆಗೆಯಲು ಅನುಮತಿಗೆ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗಣಿ ಇಲಾಖೆಯ ಅಧಿಕಾರಿ ಮತ್ತು ಇಬ್ಬರು ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ಮತ್ತು ವಾಹನ ಚಾಲಕ ಮಧು ಎಂದು ಗುರುತಿಸಲಾಗಿದೆ.
ದೂರುದಾರರು ಉಳ್ಳಾಲ ತಾಲೂಕು ಇರಾ ಗ್ರಾಮದ ಸರ್ವೆ ನಂಬ್ರ 279/5 ರಲ್ಲಿ 1.39 ಎಕರೆ ವಿಸ್ತೀರ್ಣದ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ ಮನೆಯನ್ನು ಕಟ್ಟುವ ಉದ್ದೇಶದಿಂದ ಕಟ್ಟಡಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ದಿನಾಂಕ 28/10/2024 ರಂದು ಅರ್ಜಿಯನ್ನು ಸಲ್ಲಿಸಿರುತ್ತಾರೆ. ತಹಶೀಲ್ದಾರ್ ಉಳ್ಳಾಲ ತಾಲೂಕುರವರು ಸಮತಟ್ಟು ಮಾಡುವ ಸಲುವಾಗಿ ಜಮೀನಿನಲ್ಲಿ ಲಭ್ಯವಿರುವ ಕಟ್ಟಡಕಲ್ಲು ತೆಗೆಯಲು ಪ್ರಮಾಣಪತ್ರ/ದೃಢಿಕರಣ ಪತ್ರ ನೀಡಬಹುದಾಗಿದೆ ಎಂಬುದಾಗಿ ದಿನಾಂಕ 21/03/2025ರಂದು ವರದಿ ಸಲ್ಲಿಸಿದ್ದರೂ ಕೂಡ ಗಣಿ ಇಲಾಖೆಯಿಂದ ಅನುಮತಿ ನೀಡಿರುವುದಿಲ್ಲ.

ಈ ಬಗ್ಗೆ ಅರ್ಜಿಯ ಬಗ್ಗೆ ವಿಚಾರಿಸಲು ಪಿರ್ಯಾದಿದಾರರು ಮಂಗಳೂರು ಗಣಿ ಇಲಾಖೆ ಕಛೇರಿಗೆ ತೆರಳಿದ್ದು, ಅಲ್ಲಿನ ಉಪನಿರ್ದೇಶಕರಾದ ಕೃಷ್ಣವೇಣಿ ರವರು ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಯಿಸಿ ಫೈಲಿಗೆ 50,000/- ತಗೊಳ್ಳಿ, ನಂತರ ಸೈನ್ ಮಾಡುವ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ರವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಈ ದಿನ ದಿನಾಂಕ 28.05.2025 ರಂದು ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿರವರು ಚಾಲಕ ಮಧುರವರ ಮೂಲಕ ರೂ 50,000/- (ಐವತ್ತು ಸಾವಿರ) ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸದರಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಶ್ರೀ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಶ್ರೀ ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ, ಶ್ರೀ ಚಂದ್ರಶೇಖರ್ ಕೆ.ಎನ್ ರವರು ಹಾಗೂ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣಿಯ ಪೊಲೀಸ್ ನಿರೀಕ್ಷಕರಾದ ಶ್ರೀ ಮಂಜುನಾಥ, ಶ್ರೀ ರಾಜೇಂದ್ರ ನಾಯ್ಕ ರವರು ಮಂಗಳೂರು ಮತ್ತು ಉಡುಪಿ ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ