LATEST NEWS
ಯಕ್ಷಗಾನದಲ್ಲಿ ಲಿಪ್‌ಲಾಕ್ ;ಬಣ್ಣ ಹಚ್ಚದಿರಲು ಕಲಾವಿದರ ನಿರ್ಧಾರ
ಯಕ್ಷಗಾನದಲ್ಲಿ ಲಿಪ್‌ಲಾಕ್ ;ಬಣ್ಣ ಹಚ್ಚದಿರಲು ಕಲಾವಿದರ ನಿರ್ಧಾರ
ಪುತ್ತೂರು, ಸೆಪ್ಟೆಂಬರ್ 26 : ಯಕ್ಷಗಾನದಲ್ಲಿನ ಸನ್ನಿವೇಶವೊಂದರಲ್ಲಿ ವಿವಾದತ್ಮಕ ಲಿಪ್ ಲಾಕ್ ಅಪಪ್ರಚಾರಕ್ಕೆ ಬೇಸತ್ತ ಕಟೀಲು ಮೇಳದ ಕಲಾವಿದರು ಯಕ್ಷಗಾನವನ್ನೇ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರೀಯಿಸಿರುವ ಕಲಾವಿದ ಪ್ರಶಾಂತ ನೆಲ್ಯಾಡಿ ‘ನಾನಂತೂ ತಪ್ಪು ಮಾಡಿಲ್ಲ. ಸಹ ಕಲಾವಿದ ನನ್ನ ಕಿವಿಯಲ್ಲಿ ಭಾಗವತರ ಸೂಚನೆ ನೀಡಿದ್ದರು.
ನೋಡಿದವರಿಗೆ ತಪ್ಪು ಅಂತ ಕಾಣಿಸಿದರೆ ನಾನು ಏನು ಮಾಡಲು ಸಾಧ್ಯ ? ಎಂದು ಪ್ರಶ್ನಿಸಿದ ಅವರು ತಪ್ಪೋ ಸರಿಯೋ ಆದರೆ ಮುಂದೆ ಯಕ್ಷಗಾನ ಕಲಾವಿದರಿಗೆ ಸಮಸ್ಯೆ ಆಗಬಾರದು.
ಮನಸ್ಸಿಗೆ ತುಂಬಾ ನೋವಾಗಿದೆ, ಈ ಕಾರಣಕ್ಕೆ ಬಣ್ಣ ಹಚ್ಚದಿರಲು ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.
ನನ್ನ ಯಕ್ಷ ಲೋಕದ ಬದುಕು ಬಲಿಯಾಗಲಿ, ಆದರೆ ಮುಂದೆ ಈ ರೀತಿ ಕಲಾವಿದರ ಮಾನ ಹರಣ ಮಾಡುವ ಕೆಲಸ, ಯಕ್ಷ ವಿಮರ್ಶಕರು ಮತ್ತು ಮಾಧ್ಯಮಗಳು ಮಾಡಬಾರದು. ಪ್ರಾಮಾಣಿಕ ಕಲಾವಿದರ ಪರವಾಗಿ ಯಕ್ಷ ಪ್ರೇಮಿಗಳು ಮುಂದೆ ಬಂದು ಬೆಂಬಲಿಸುವ ಧೈರ್ಯ ಬರುವಂತಾಗಬೇಕು.
ಈ ಉದ್ದೇಶದಿಂದಲೇ ನಾನು ವೇಷ ಹಾಕುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮನದ ನೋವನ್ನು ಹೊರಗೆಡಹಿದ್ದಾರೆ.
ಪ್ರಶಾಂತ್ ನೆಲ್ಯಾಡಿ ಯಾರು ?
ಪ್ರಶಾಂತ್ ನೆಲ್ಯಾಡಿ ಕಟೀಲು ದುರ್ಗಾ ಪರಮೇಶ್ವರಿ 5 ನೇ ಮೇಳದ ದೇವಿ ಪಾತ್ರಧಾರಿಯಾಗಿದ್ದಾರೆ. ಸಾವಿರಾರು ಅಭಿಮಾನಿ ವರ್ಗವನ್ನು ಕಟ್ಟಿಕೊಂಡಿದ್ದಾರೆ ಪ್ರಶಾಂತರ ದೇವಿ ಪಾತ್ರ ನೋಡಲು ನಿತ್ಯ ಅಭಿಮಾನಿಗಳು ಆಟ ಎಲ್ಲೇ ಇದ್ದರೂ ಬಂದೇ ಬರುತ್ತಾರೆ.
ಎಲ್ಲಾ ವರ್ಗದ ಅಭಿಮಾನಿಗಳು ಇದ್ದಾರೆ. ಅಭಿಮಾನಿಗಳಲ್ಲಿ ಉಪನ್ಯಾಸಕರು, ಮುಸ್ಲಿಂ, ಪೊಲೀಸರು ಇದ್ದಾರೆ. ಅದರೆ ಈಗ ಯಕ್ಷಗಾನವನ್ನೇ ತೊರೆಯುವ ನಿರ್ಧಾರ ಕೈಗೊಂಡಿರುವುದು ಯಕ್ಷ ಪ್ರೇಮಿಗಳಿಗೆ ತೀವ್ರ ನೋವನ್ನು ತಂದಿದೆ.