LATEST NEWS
ಮಣಿಪಾಲ ವಿಜಯನಗರ ಕೋಡಿಯಲ್ಲಿ ಬೋನಿಗೆ ಬಿದ್ದ ಚಿರತೆ

ಉಡುಪಿ ಸೆಪ್ಟೆಂಬರ್ 5: ಉಡುಪಿ ಜಿಲ್ಲೆ ಮಣಿಪಾಲ ಸಮೀಪದ ವಿಜಯನಗರ ಕೋಡಿ ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇಂದು ಬೆಳಿಗ್ಗೆ ಚಿರತೆಯೊಂದು ಬಿದ್ದಿದೆ.
ಕಳೆದ ಕೆಲ ದಿನಗಳಿಂದ ವಿಜಯನಗರ ಕೋಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆಯು ಜನರಲ್ಲಿ ಭೀತಿ ಹುಟ್ಟಿಸಿತ್ತು. ಸುತ್ತಮುತ್ತಲಿನ ಮನೆಯ ಹಟ್ಟಿಯಲ್ಲಿದ್ದ ಕರು, ನಾಯಿ, ಕೋಳಿಗಳನ್ನು ಹಿಡಿದು ತಿನ್ನುತ್ತಿತ್ತು. ಚಿರತೆಯ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಭಾಗದಲ್ಲಿ ಜನರು ರಾತ್ರಿ ಹೊರಬರಲು ಭಯಪಡುತ್ತಿದ್ದರು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅದರಂತೆ ಚಿರತೆಯನ್ನು ಸೆರೆ ಹಿಡಿಯಲು ಇಲಾಖೆಯವರು ಬೋನು ಇರಿಸಿದ್ದರು.

ಇಂದು ನಸುಕಿನ ವೇಳೆ ಚಿರತೆ ಸೆರೆಯಾಗಿದೆ. ಬೋನಿನೊಳಗೆ ಎರಡು ನಾಯಿ ಮರಿಗಳನ್ನು ಇರಿಸಿ ಚಿರತೆಯನ್ನು ಸೆರೆಹಿಡಿಯಲಾಯ್ತು. ಕೊನೆಗೂ ಜನರ ನಿದ್ರೆ ಕೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದೆ.