LATEST NEWS
ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿಲೀನಕ್ಕೆ ಕೇಂದ್ರ ಒಪ್ಪಿಗೆ
ನವದೆಹಲಿ, ನವೆಂಬರ್ 26: ತಮಿಳುನಾಡು ಮೂಲದ ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್‌ವಿಬಿ) ಅನ್ನು ಸಿಂಗಾಪುರ ಮೂಲದ ಬ್ಯಾಂಕ್ ನ ಭಾರತೀಯ ಸಂಸ್ಥೆ ಡಿಬಿಎಸ್ ಬ್ಯಾಂಕ್ ಇಂಡಿಯಾದಲ್ಲಿ (ಡಿಬಿಐಎಲ್) ವಿಲೀನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ವಿತ್ ಡ್ರಾವಲ್ ಮೇಲೆ ಹೇರಿದ್ದ ಮಿತಿಯನ್ನು ತೆಗೆದು ಹಾಕಲಾಗಿದೆ ಎಂದು ಸಂಪುಟ ಸಭೆಯ ನಂತರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ತಿಳಿಸಿದರು.
ಈ ನಿರ್ಧಾರದಿಂದ ಸುಮಾರು 20 ಲಕ್ಷ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಬ್ಯಾಂಕ್‌ನ 4,000 ನೌಕರರ ಉದ್ಯೋಗದ ರಕ್ಷಣೆಯೂ ಆಗಲಿದೆ. ಠೇವಣಿದಾರರ 20,000 ಕೋಟಿ ರೂಪಾಯಿ ಸುರಕ್ಷಿತವಾಗಿದ್ದು ಯಾರೂ ಚಿಂತಿಸುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು. ಗ್ರಾಹಕರು 25,000 ರೂಪಾಯಿಗಿಂತ ಹೆಚ್ಚು ಹಣವನ್ನು ಖಾತೆಗಳಿಂದ ಹಿಂದೆ ಪಡೆಯಬಾರದು ಎಂದು ಆರ್‌ಬಿಐ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ನವೆಂಬರ್ 17ರಂದು ನಿರ್ಬಂಧ ಹೇರಿತ್ತು. ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿದ್ದ ಆರ್‌ಬಿಐ, ಕೆನರಾ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ.ಎನ್. ಮನೋಹರನ್ ಅವರನ್ನು 30 ದಿನ ಅವಧಿಗೆ ಆಡಳಿತಗಾರರನ್ನಾಗಿ ನೇಮಿಸಿತ್ತು.
20 ರಾಜ್ಯಗಳಲ್ಲಿ ಶಾಖೆ: 1926ರಲ್ಲಿ ತಮಿಳುನಾಡಿನ ಕರೂರಿನ ಏಳು ವರ್ತಕರು ಸೇರಿ ಆರಂಭಿಸಿದ ಎಲ್ ವಿಬಿ, 20 ರಾಜ್ಯಗಳಲ್ಲಿ 566 ಶಾಖೆ, 918 ಎಟಿಎಂ ಹೊಂದಿದೆ. ಈ ವರ್ಷ ಮಾರ್ಚ್ ವೇಳೆಗೆ 836.04 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಡಿಬಿಐಎಲ್ ಬ್ಯಾಂಕಿಂಗ್ ಕಂಪನಿಯಾಗಿದ್ದು 2013ರಲ್ಲಿ ಕಂಪನಿಗಳ ಕಾನೂನಿನನ್ವಯ ಅದನ್ನು ಭಾರತದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ನವದೆಹಲಿಯಲ್ಲಿ ಅದರ ನೋಂದಾಯಿತ ಕಚೇರಿಯಿದೆ.
2480 ಕೋಟಿ ರೂಪಾಯಿ ಎಫ್‌ಡಿಐ: ಎಟಿಸಿ ಟೆಲಿಕಾಂನ ಶೇ. 12 ಷೇರು ಖರೀದಿಗೆ ಎಟಿಸಿ ಏಷ್ಯಾ ಪೆಸಿಫಿಕ್ ಕಂಪನಿ 2,480 ಕೋಟಿ ರೂಪಾಯಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸಂಪುಟ ಸಭೆ ಸಮ್ಮತಿಸಿದೆ. ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್‌ಐಐಎಫ್) ಪ್ರಾಯೋಜಿತ ಎನ್‌ಐಐಎಫ್ ಸಾಲ ವೇದಿಕೆಯಲ್ಲಿ (ಡೆಟ್ ಪ್ಲಾಟ್‌ಫಾರಂ) -ಠಿ; 6,000 ಕೋಟಿ ಬಂಡವಾಳ ಹೂಡುವ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಈ ಹೂಡಿಕೆ ಪ್ಯಾಕೇಜ್‌ನ ಭಾಗವಾಗಿದೆ. ಈ ತಿಂಗಳ ಆರಂಭದಲ್ಲಿ ಘೋಷಿಸಲಾದ ಆತ್ಮನಿರ್ಭರ ಭಾರತ್ 3.0 ಪ್ಯಾಕೇಜ್ ನ ಭಾಗವಾಗಿದೆ.