LATEST NEWS
ಕುಪ್ಪೆಪದವು, ಆಚಾರಿ ಜೋರ ; ಜ್ವರದಿಂದ ಮಲಗಿದ ಜನ, ಹೇಳೋರಿಲ್ಲ , ಕೇಳೋರಿಲ್ಲ !!

ಮಂಗಳೂರು, ಆಗಸ್ಟ್ 5 : ಕರಾವಳಿಯಲ್ಲಿ ಕೊರೊನಾ ಸೋಂಕು ಒಂದೆಡೆ ಎರ್ರಾಬಿರ್ರಿ ಎನ್ನುವಂತೆ ಹರಡುತ್ತಿದೆ. ಮಂಗಳೂರು ತಾಲೂಕಿನಲ್ಲಿಯೇ ದಿನವೂ 150ರಷ್ಟು ಮಂದಿಗೆ ಸೋಂಕು ತಗಲುತ್ತಿದೆ. ಇದೇ ವೇಳೆ, ಕೆಲವು ಗ್ರಾಮಗಳಲ್ಲಿ ಜ್ವರ ಬಾಧೆ ತೀವ್ರ ರೀತಿಯಲ್ಲಿ ಹಬ್ಬುತ್ತಿದ್ದು ಇಡೀ ಗ್ರಾಮಕ್ಕೆ ಗ್ರಾಮವೇ ಮಲಗುವಂತಾಗಿದೆ.
ಮಂಗಳೂರು ತಾಲೂಕಿನ ಕುಪ್ಪೆಪದವು ಬಳಿಯ ಆಚಾರಿ ಜೋರ ಎಂಬ 5 ಸೆನ್ಸ್ ಕಾಲನಿಯಲ್ಲಿ ಜ್ವರ ವ್ಯಾಪಕವಾಗಿ ಹಬ್ಬಿದ್ದು 25 ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಜ್ವರದಿಂದ ಬಳಲುತ್ತಿದ್ದಾರೆ. ಜನರ ಸ್ಥಿತಿ ಹೀಗಿದ್ದರೂ ಈ ಭಾಗದಲ್ಲಿ ಯಾರು ಕೂಡ ಆಶಾ ಕಾರ್ಯಕರ್ತರು ಬರುತ್ತಿಲ್ಲ ಎಂದು ಜನ ಅಲವತ್ತುಕೊಳ್ಳುತ್ತಿದ್ದಾರೆ. ಕುಪ್ಪೆಪದವಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದ್ದರೂ ಅಲ್ಲಿನ ಸಿಬಂದಿ ತಮಗೇ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

ಒಂದೆಡೆ ಕೊರೊನಾ, ಮತ್ತೊಂದೆಡೆ ಡೆಂಗ್ಯು, ಮಲೇರಿಯಾ ಹಾವಳಿ. ಇನ್ನೊಂದೆಡೆ ಒಂದೇ ಸಮನೆ ಹೊಡೆಯುತ್ತಿರುವ ಮಳೆ ಕರಾವಳಿಯ ಜನರನ್ನು ಹೈರಾಣಾಗಿಸಿದೆ. ಮಲೇರಿಯಾ, ಡೆಂಗ್ಯು ಭೀತಿ ಎದುರಾಗಿದ್ದರೂ, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಆಚಾರಿ ಜೋರ ಕಾಲನಿಯಲ್ಲಿ ಒಂದು ತಿಂಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ ಮುಂಬೈನಿಂದ ಬಂದಿದ್ದ ಯುವಕ ಮೃತಪಟ್ಟಿದ್ದ. ಆನಂತರ ಕುಪ್ಪೆಪದವಿನಲ್ಲಿಯೂ ಕೊರೊನಾ ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದರು. ಹೀಗಾಗಿ ಜನರಲ್ಲಿ ಕೊರೊನಾ ಭೀತಿಯೂ ಮಡುಗಟ್ಟಿದೆ. ಈ ಪ್ರದೇಶಕ್ಕೆ ಮಂಗಳೂರು ತಹಸೀಲ್ದಾರ್ ಭೇಟಿಯಾಗಿ ತುರ್ತು ಆರೋಗ್ಯ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.