LATEST NEWS
ಕುಂದಾಪುರ – ಪತ್ನಿಯನ್ನು ಕತ್ತಿಯಿಂದ ಕಡಿದು ಡ್ಯಾನ್ಸ್ ಮಾಡುತ್ತ ವಿಕೃತಿ ಮೆರೆದ ಪತಿ
ಉಡುಪಿ, ಆಗಸ್ಟ್.04: ಕಂಠಪೂರ್ತಿ ಕುಡಿದು ತನ್ನ ಹೆಂಡತಿಯ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಬಳಿಕ ಪತಿ ಡ್ಯಾನ್ಸ್ ಮಾಡುತ್ತ ವಿಕೃತಿ ಮೆರೆದ ಘಟನೆ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಅನಿತಾ (38) ಎಂದು ಗುರುತಿಸಲಾಗಿದ್ದು, ಇವರಪ ಪತಿ ಲಕ್ಷ್ಮಣ ಕತ್ತಿಯಿಂದ ಹಲ್ಲೆ ಮಾಡಿ ಬಳಿಕ ನರ್ತನ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಅನಿತಾಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಲಾಗುತ್ತಿದೆ.
ಸೊರಬ ಮೂಲದ ಇಬ್ಬರು ಬಸ್ರೂರು ಕಾಶಿ ಮಠ, ರೆಸಿಡೆನ್ಶಿಯಲ್ ಬ್ಲಾಕ್ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರು ಕಾಶಿ ಮಠದ ತೋಟ ನೋಡಿಕೊಳ್ಳುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ತೋಟ ನೋಡಿಕೊಳ್ಳಲು ಉಡುಪಿ ಜಿಲ್ಲೆಗೆ ಬಂದಿದ್ದರು. ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿದ್ದ ಪತಿ ಲಕ್ಷ್ಮಣ ತನ್ನ ಪತ್ನಿಯ ಕುತ್ತಿಗೆ ಕಡಿದು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ. ಮನೆಯ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿತಾಳನ್ನು ಮನೆಯಲ್ಲೇ ಬಿಟ್ಟು ಮನೆಯ ಬಾಗಿಲ ಚಿಲಕ ಹಾಕಿ ಹಾಲ್ ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ನರ್ತನೆ ಮಾಡಿ ಅಟ್ಟಹಾಸ ಮೆರೆದಿದ್ದಾನೆ.
ಕೆಲ ಕ್ಷಣದ ಬಳಿಕ ಸ್ಥಳೀಯರಿಗೆ ವಿಚಾರ ತಿಳಿದಿದ್ದು ಕೂಡಲೇ ಕಿಟಕಿ ಒಡೆದು ಅಡುಗೆ ಕೋಣೆಗೆ ತೆರಳಿ ಮಹಿಳೆಯನ್ನು ಹೊರತಂದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿ ಮಹಿಳೆಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇಷ್ಟಾದರೂ ಮೈ ಮೇಲೆ ದೈವ ಬಂದವರಂತೆ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಿದ್ದ ಪತಿ ಯಾವುದಕ್ಕೂ ಕ್ಯಾರೇ ಎಂದಿಲ್ಲ. ಸದ್ಯ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದು ಒಂದೂವರೆ ಗಂಟೆಯ ಬಳಿಕ ಆರೋಪಿ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇಂದು ಭೀಮನ ಅಮಾವಸ್ಯೆ ಬೇರೆ ಇದ್ದು ತಡ ರಾತ್ರಿ ವ್ಯಕ್ತಿಯ ವರ್ತನೆ ನೋಡಿ ಜನರಲ್ಲಿ ಭಯ ಮೂಡಿದೆ.
You must be logged in to post a comment Login