LATEST NEWS
ಶ್ರೀಲಂಕಾ ಬಾಂಬ್ ಸ್ಪೋಟ ಆಯುರ್ವೇದಿಕ್ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಸಿಎಂ

ಶ್ರೀಲಂಕಾ ಬಾಂಬ್ ಸ್ಪೋಟ ಆಯುರ್ವೇದಿಕ್ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಸಿಎಂ
ಉಡುಪಿ ಎಪ್ರಿಲ್ 23: ಕಾಪುವಿನಲ್ಲಿ ಆಯರ್ವೇದಿಕ್ ಚಿಕಿತ್ಸೆ ಪಡೆಯಲು ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎರಡೇ ದಿನಕ್ಕೆ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸಾಗಿದ್ದಾರೆ.
ಬೆಂಗಳೂರಿಗೆ ಹೊರಡುವ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಶ್ರೀಲಂಕಾ ಬಾಂಬ್ ಸ್ಪೋಟ ಪ್ರಕರಣ ನನ್ನನ್ನು ತೀವ್ರವಾಗಿ ಘಾಸಿಗೊಳಿಸಿದೆ. ಅಲ್ಲದೆ ಸೋಮವಾರದಿಂದ ಇದೇ ತಲೆಯಲ್ಲಿ ಕಾಡುತ್ತಿದೆ ಎಂದು ಹೇಳಿದರು.

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‍ಸ್ಫೋಟ ಅತ್ಯಂತ ಮೃಗೀಯವಾದ ಘಟನೆಯಾಗಿದೆ. ಈ ಘಟನೆಯಲ್ಲಿ ಅಲ್ಲಿನ ಜನರು ಮತ್ತು ಪ್ರವಾಸಿಗರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ.
ನಮ್ಮ ರಾಜ್ಯದಿಂದ ಪ್ರವಾಸಕ್ಕ ಹೋಗಿದ್ದ ಏಳು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಮೊದಲು ನಾನು ನೊಂದ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ನನ್ನ ಪಕ್ಷದ ಐದು ಜನ ನಾಯಕರು ಮೃತಪಟ್ಟಿದ್ದಾರೆ. ಅವರು ಪಕ್ಷದ ಆಧಾರ ಸ್ತಂಭಗಳಾಗಿದ್ದರು. ಇದರಿಂದ ಪಕ್ಷಕ್ಕೆ ಮತ್ತು ಅವರ ಕುಟುಂಬಕ್ಕೆ ಆಘಾತ ತಂದಿದೆ. ಈ ರೀತಿ ನನ್ನ ಪಕ್ಷದ ನಾಯಕರು ಮೃತಪಡುತ್ತಾರೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ.
ಹನುಮಂತರಾಯಪ್ಪ, ರಂಗಣ್ಣ, ಶಿವಣ್ಣ, ಲಕ್ಷ್ಮೀನಾರಾಯಣ, ರಮೇಶ್ ನನ್ನ ಜೊತೆ ಬಹಳ ಆತ್ಮೀಯರಾಗಿದ್ದರು. ಈ ಐವರು ನಮ್ಮ ಪಕ್ಷದ ಶಕ್ತಿಯಾಗಿದ್ದು, ಅವರ ಅಗಲಿಕೆಯಿಂದ ನೆಲಮಂಗಲದಲ್ಲಿ 50% ಶಕ್ತಿ ಕುಸಿತವಾಗಿದೆ. ಪ್ರಾಮಾಣಿಕ, ಸಾಮಾಜಿಕ ಸೇವೆ ಮಾಡುವವರನ್ನು ಕಳೆದುಕೊಂಡಿದ್ದೇವೆ ಎಂದು ದುಃಖದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದರು.
ಸದ್ಯಕ್ಕೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ಕೊಡಲಾಗಿದೆ. ಶ್ರೀಲಂಕಾ ಸಚಿವಾಲಯ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇವೆ. ಈಗಾಗಲೇ ಏಳು ಪಾರ್ಥಿವ ಶರೀರವನ್ನು ಗುರುತಿಸಲಾಗಿದೆ. ಅಧಿಕಾರಿ ಮಂಜುನಾಥ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆಗಾಗ ಕರೆ ಮಾಡಿ ನಾನು ಮಾತನಾಡುತ್ತಿದ್ದೇನೆ. ಮರಣೋತ್ತರ ಪ್ರಕ್ರಿಯೆ ಶೀಘ್ರವಾಗಿ ಮುಗಿಸಲು ಮನವಿ ಮಾಡಲಾಗಿದ್ದು, 24 ಗಂಟೆಯೊಳಗೆ ಪಾರ್ಥೀವ ಶರೀರ ಕಳುಹಿಸಲು ಪ್ರಯತ್ನಿಸುತ್ತೇವೆ ಎಂದರು.
ನಾನು ಮೂರು ನಾಲ್ಕು ದಿನ ಕಾಪುವಿನಲ್ಲಿ ಆಯುರ್ವೇದಿಕ್ ಚಿಕಿತ್ಸೆಗೆಂದು ಉಳಿದುಕೊಳ್ಳಬೇಕೆಂದಿದ್ದೆ. ಆದರೆ ನಿನ್ನೆಯಿಂದ ನನಗೆ ನೋವನ್ನು ತಡೆದುಕೊಳ್ಳಲಾಗುತ್ತಿಲ್ಲ. ಹೀಗಾಗಿ ವೈದ್ಯರ ಜೊತೆ ಚರ್ಚೆ ಮಾಡಿದ್ದೇನೆ. ಅವರು 27 ರ ನಂತರ ಮತ್ತೆ ಉಡುಪಿಗೆ ಬರಲು ಸೂಚಿಸಿದ್ದಾರೆ. ಚಿಕಿತ್ಸೆ ಮುಂದೂಡಿ ಕರ್ತವ್ಯ ಮಾಡಲು ಹೊರಟಿದ್ದೇನೆ ಎಂದು ಹೇಳಿದರು.