DAKSHINA KANNADA
ನಾಳೆಯಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ದೇವರ ಸೇವೆಗಳು ಪ್ರಾರಂಭ

ಮಂಗಳೂರು ಸೆಪ್ಟೆಂಬರ್ 13: ಹೆಸರಾತ ನಾಗಕ್ಷೇತ್ರ ಕುಕ್ಕೆಸುಬ್ರಹ್ಮಣ್ಯದಲ್ಲಿ ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ವಿವಿಧ ಸೇವೆಗಳನ್ನು ನಾಳೆಯಿಂದ ಪ್ರಾರಂಭಿಸಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಕುಕ್ಕೆ ಸುಬ್ರಹ್ಮಣ್ಯದ ಬಹು ಬೇಡಿಕೆಯ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಎಲ್ಲಾ ಸೇವೆಗಳು ನಾಳೆಯಿಂದ ಆರಂಭವಾಗಲಿದೆ. ಕರೊನಾ ವೈರಸ್ ಹಿನ್ನೆಲೆಯಲ್ಲಿ ಕೆಲವೊಂದು ಷರತ್ತುಗಳನ್ನು ಪೂಜಾ ವಿಧಿ ವಿಧಾನಗಳಿಗೆ ಸಂಬಂಧಿಸಿದಂತೆ ಅನ್ವಯ ಮಾಡಲಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ.

ಪ್ರತಿದಿನ ಕೇವಲ 30 ಸರ್ಪಸಂಸ್ಕಾರ, ನಾಗಪ್ರತಿಷ್ಠೆ ಸೇವೆಗಳು ನಡೆಯಲಿದ್ದು, ಆಶ್ಲೇಶ ಬಲಿ ಸೇವೆಗೆ ಬೆಳಗ್ಗಿನ ಒಂದು ಪಾಳಿಯಲ್ಲಿ 30 ಭಕ್ತರಿಗೆ, ಎರಡು ಪಾಳಿಯಲ್ಲಿ ಒಟ್ಟು 60 ಭಕ್ತರಿಗೆ ಅವಕಾಶ ನೀಡಲಾಗುವುದು . ಅಲ್ಲದೆ ಮಹಾಪೂಜೆ ಹಾಗೂ ಪಂಚಾಮೃತಾಭಿಷೇಕ ಸೇವೆಗಳಿಗೆ 10 ಟಿಕೆಟ್ ನೀಡಲಾಗುವುದು ಈ ಸಂದರ್ಭ ಪ್ರತಿ ಸೇವೆಗೆ ತಲಾ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಸರ್ಪಸಂಸ್ಕಾರದ ಸೇವ ಬಗ್ಗೆ ಆನ್‌ಲೈನ್ / ನಗದು / ಡಿ.ಡಿ. / ಎಂ.ಪಿ. ಮೂಲಕ ಈಗಾಗಲೇ ಕಾದಿರಿಸಿದ ಸೇವಾ ಕರ್ತರಿಗೆ ಮಾತ್ರ ಅವಕಾಶ ನೀಡಲಾಗಿದ್ದು. ಹೊಸದಾಗಿ ಸರ್ವ ಸಂಸ್ಕಾರ ಸೇವೆಗೆ ಪ್ರಸ್ತುತ ಅವಕಾಶವಿರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಸರ್ಪಸಂಸ್ಕಾರದ ಸೇವಾರ್ಥಿಗಳಿಗೆ ಕ್ಷೇತ್ರದಲ್ಲಿ ತಂಗಲು 2 ದಿನಕ್ಕೆ ಅವಕಾಶ ಹಾಗೂ ಇತರ ಸೇವಾರ್ಥಗಳಿಗೆ 1 ದಿನದ ಅವಕಾಶ ಮಾತ್ರ ನೀಡಲಾಗಿದೆ. ಇನ್ನು ದೇವಳದಲ್ಲಿ ಅನ್ನಪ್ರಸಾದ ವ್ಯವಸ್ಥೆ ಕೇವಲ ಸೇವಾರ್ಥಿಗಳಿಗೆ ಮಾತ್ರ ಇದೆ.