KARNATAKA
KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್

ಬೆಂಗಳೂರು,ಅಕ್ಟೋಬರ್ 19 : ವಾರಾಂತ್ಯ ದಿನಗಳಂದು ಪ್ರತಿಷ್ಠಿತ ಸಾರಿಗೆಗಳಲ್ಲಿ ಶೇ.10ರಷ್ಟು ವಿಧಿಸಲಾಗುತ್ತಿದ್ದ ಹೆಚ್ಚುವರಿ ಪ್ರಯಾಣದ ದರವನ್ನು ಕೆಎಸ್‍ಆರ್ ಟಿಸಿ ರದ್ದುಪಡಿಸಿದೆ. ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಪತ್ರ ಬರೆದಿದ್ದಾರೆ.
ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಪ್ರತಿಷ್ಠಿತ ಹವಾನಿಯಂತ್ರಿತ ಸಾರಿಗೆಗಳಲ್ಲಿ ಪ್ರಯಾಣಿಸಲು ಸಾರ್ವಜನಿಕರು ಆಸಕ್ತಿಯನ್ನು ತೋರುತ್ತಿಲ್ಲ. ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಂದು ಶೇ.10 ಹೆಚ್ಚುವರಿ ಪ್ರಯಾಣದರ ಇಲ್ಲ.

ಖಾಸಗಿ ಬಸ್ ಮತ್ತು ಪ್ರತಿಷ್ಠಿತ ಸಾರಿಗೆಗಳಲ್ಲಿನ ಪ್ರಯಾಣದರ ನಿಗಮದ ಸಾರಿಗೆಗಳಲ್ಲಿ ನಿಗದಿಪಡಿಸಿದ ಪ್ರಯಾಣದರಕ್ಕಿಂತ ಕಡಿಮೆಯಿದ್ದು, ಪ್ರಯಾಣಿಕರನ್ನು ನಿಗಮದ ಸಾರಿಗೆಗಳತ್ತ ಆಕರ್ಷಿಸುವ ದೃಷ್ಟಿಯಿಂದ ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಂದು ಶೇ.10 ರಷ್ಟು ಪ್ರಯಾಣದರವನ್ನು ಹೆಚ್ಚಿಸಿ ಪ್ರಯಾಣದರ ವಿಧಿಸುತ್ತಿರುವುದನ್ನು ಡಿಸೆಂಬರ್ 20 ರವರೆಗೆ ಹಿಂಪಡೆಯುವುದು ಸೂಕ್ತವೆಂದು ಭಾವಿಸಿ ನಿಗಮ ಈ ಆದೇಶವನ್ನು ಹೊರಡಿಸಿದೆ.
ಅಕ್ಟೋಬರ್ 10 ರಿಂದ ಡಿಸೆಂಬರ್ 31ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ವಾರದ ಎಲ್ಲಾ ದಿನಗಳಂದು ಅನುಮೋದಿತ ಏಕರೂಪ ಪ್ರಯಾಣದರವನ್ನು ಆಕರ್ಷಿಸಿ ಸಾರಿಗೆಗಳನ್ನು ಕಾರ್ಯಚರಿಸಲು ಕ್ರಮ ಕೈಗೊಳ್ಳುಬೇಕೆಂದು ಸೂಚಿಸಲಾಗಿದೆ.