DAKSHINA KANNADA
ಚಿಲ್ಲರೆ ಇಲ್ಲ ಎಂದು 75 ವರ್ಷದ ವೃದ್ದನನ್ನು ಮಾರ್ಗ ಮಧ್ಯೆ ಇಳಿಸಿದ ಕೆಎಸ್ಆರ್ ಟಿಸಿ ಬಸ್ ನಿರ್ವಾಹಕ

ಸುಬ್ರಹ್ಮಣ್ಯ ಜನವರಿ 07: ಚಿಲ್ಲರೆ ಇಲ್ಲ ಎಂದು 75 ವರ್ಷದ ವೃದ್ದನನ್ನು ಕೆಎಸ್ಆರ್ ಟಿಸಿ ಬಸ್ ನಿರ್ವಾಹಕ ಮಾರ್ಗ ಮಧ್ಯೆ ಇಳಿಸಿದ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ಜನವರಿ 6ರಂದು ನಡೆದಿದೆ.
ಕಲ್ಲುಗುಡ್ಡೆಯಿಂದ ಉಪ್ಪಿನಂಗಡಿಗೆ ಸಂಚರಿಸುವ ಈ ಬಸ್‌ಗೆ ಶಾಂತಿಗುರಿ ನಿವಾಸಿ ಬಾಬು ಗೌಡರು ಕಾಂಚನಕ್ಕೆ ತೆರಳಲು ಹತ್ತಿದ್ದು, ಟಿಕೆಟ್ ನೀಡುವ ಸಂದರ್ಭ ಅವರು 200 ರೂ. ನೋಟು ನೀಡಿದ್ದರು. ಈ ಸಂದರ್ಭ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ ಬಾಬು ಗೌಡರನ್ನು ಗೋಳಿಯಡ್ಕ ಎಂಬಲ್ಲಿ ಇಳಿಸಿ ಅಗೌರವ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಮುಂದೆ ಚಿಲ್ಲರೆ ಆಗುವ ವೇಳೆ ಚಿಲ್ಲರೆ ನೀಡುವಂತೆ ಬಾಬು ಅವರು ತಿಳಿಸಿದ್ದರೂ ಸ್ಪಂದಿಸದ ನಿರ್ವಾಹಕ ಹಿರಿಯ ವ್ಯಕ್ತಿಯನ್ನು ಮಾರ್ಗಮಧ್ಯೆ ಇಳಿಸಿದ್ದಾರೆ. ಬಸ್ ನಿರ್ವಾಹಕನ ನಡೆಗೆ ಬೇಸರ ವ್ಯಕ್ತಪಡಿಸಿದ ಬಾಬು ಅವರು, ಈ ರೀತಿ ನಡೆಸಿಕೊಂಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಘಟನೆ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.