LATEST NEWS
ಒಡಿಶಾ – ನೇಪಾಳಿ ವಿಧ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ -ರಾಯಭಾರಿ ಅಧಿಕಾರಿಗಳೊಂದಿಗೆ ನೇಪಾಳದ ಪ್ರಧಾನಿ ಸಭೆ

ಭುವನೇಶ್ವರ ಫೆಬ್ರವರಿ 18: ವಿಧ್ಯಾರ್ಥಿಯೊಬ್ಬನ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಶರಣಾದ ಭುವನೇಶ್ವರದಲ್ಲಿನ ಕಳಿಂಗಾ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆಯಲ್ಲಿ ಕಲಿಯುತ್ತಿದ್ದ ನೇಪಾಳಿ ವಿಧ್ಯಾರ್ಥಿನಿ ಪ್ರಕೃತಿ ಲಾಮ್ರಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳದ ಪ್ರಧಾನಿ ರಾಯಭಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
KIITಯಲ್ಲಿ ಮೂರನೇ ವರ್ಷದಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ನೇಪಾಳಿ ವಿದ್ಯಾರ್ಥಿನಿ ಪ್ರಕೃತಿ ಲಾಮ್ರಾಲ್ ಭಾನುವಾರ ಸಂಜೆ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಘಟನೆಯಿಂದ KIITಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ನ್ಯಾಯಕ್ಕಾಗಿ ಆಗ್ರಹಿಸಿ 500 ಕ್ಕೂ ಹೆಚ್ಚು ನೇಪಾಳಿ ವಿದ್ಯಾರ್ಥಿಗಳು ಸಂಸ್ಥೆಯ ವಿರುದ್ಧ ಭಾನುವಾರ ರಾತ್ರಿಯೇ ದಿಢೀರ್ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದರಿಂದ ಕುಪಿತಗೊಂಡ KIIT ಆಡಳಿತ ಮಂಡಳಿ, ಪ್ರತಿಭಟನೆ ನಡೆಸಲು ಮುಂದಾದ ನೇಪಾಳಿ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಖಾಲಿ ಮಾಡಿಸಿ ವಾಪಸ್ ಊರಿಗೆ ಹೋಗಿ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಎಚ್ಚೆತ್ತುಕೊಂಡು ಭಾರತದಲ್ಲಿನ ನೇಪಾಳಿ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು, KIITಯಲ್ಲಿ ನಡೆದ ದುರಾದೃಷ್ಟಕರ ಘಟನೆ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದ್ದು, ನಮ್ಮ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಭುವನೇಶ್ವರಕ್ಕೆ ಕಳುಹಿಸಿ ಕೊಡಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಎಂದು ಹೇಳಿದ್ದಾರೆ.