KARNATAKA
ನಿಫಾ ವೈರಸ್ : ಕೇರಳಕ್ಕೆ ಅಕ್ಟೋಬರ್ ವರೆಗೆ ತೆರಳದಂತೆ ಸಾರ್ವಜನಿಕರಿಗೆ ರಾಜ್ಯ ಸರಕಾರದ ಸೂಚನೆ
ಬೆಂಗಳೂರು ಸೆಪ್ಟೆಂಬರ್ 07: ಕೊರೊನಾದಿಂದ ನಲುಗಿರುವ ಕೇರಳ ರಾಜ್ಯದಲ್ಲಿ ಇದೀಗ ಮಾರಣಾಂತಿಕ ನಿಫಾ ವೈರಸ್ ಪತ್ತೆಯಾಗಿರುವ ಹಿನ್ನಲೆ ಗಡಿ ರಾಜ್ಯ ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಿದ್ದು, ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳು, ಹೋಟೆಲ್, ಆಸ್ಪತ್ರೆ, ನರ್ಸಿಂಗ್ ಹೋಮ್, ಕಾರ್ಖಾನೆ ಮುಂತಾದ ಸಂಸ್ಥೆಗಳ ಆಡಳಿತ ವರ್ಗ/ಮಾಲೀಕರಿಗೆ ಕೇರಳದಿಂದ ಆಗಮಿಸುವ ತಮ್ಮ ವಿದ್ಯಾರ್ಥಿಗಳು/ಉದ್ಯೋಗಿಗಳಿಗೆ ಅಕ್ಟೋಬರ್ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡುವಂತೆ ಆದೇಶಿಸಿದೆ.
ರಾಜ್ಯದ ಸಾರ್ವಜನಿಕರು ಅಕ್ಟೋಬರ್ ಅಂತ್ಯದವರೆಗೂ ಕೇರಳಕ್ಕೆ ಪ್ರಯಾಣಿಸದಂತೆ ರಾಜ್ಯ ಸರ್ಕಾರ ಹೇಳಿದೆ. ತುರ್ತು ಅಗತ್ಯವಿಲ್ಲದಿದ್ದಲ್ಲಿ ಕೇರಳ ಪ್ರಯಾಣವನ್ನು ಮುಂದೂಡುವಂತೆ ಸರ್ಕಾರ ಸಲಹೆ ನೀಡಿದೆ. ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಮತ್ತು ಚಾಮರಾಜನಗರದಲ್ಲಿ ಬಿಗಿ ಕಣ್ಗಾವಲು ನಿಯೋಜಿಸಲಾಗುತ್ತಿದೆ.ಈ ಕುರಿತು ಮಾರ್ಗಸೂಚಿ ಬಿಡುಗಡೆಗೊಳಿಸಿರುವ ರಾಜ್ಯ ಆರೋಗ್ಯ ಇಲಾಖೆ, ಕೇರಳದಿಂದ ಅಗಮಿಸುವವರನ್ನು ತಪಾಸಣೆಗೊಳಪಡಿಸುವವರನ್ನು ಜ್ವರ, ಮಾನಸಿಕ ಸ್ಥಿತಿಗತಿ, ದುರ್ಬಲತೆ, ತಲೆನೋವು, ಶ್ವಾಸಕೋಶದ ತೊಂದರೆ, ಕೆಮ್ಮು, ವಾಂತಿ, ಸ್ನಾಯುಸೆಳೆತದಂತಹ ಲಕ್ಷಣಗಳಿವೆಯೇ ಎಂದು ಪರಿಶೀಲಿಸಬೇಕು ಎಂದು ಸೂಚಿಸಿದೆ.
ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಅವರ ಮಾದರಿಗಳನ್ನು ಪಡೆದು ಪುಣೆಯ ಎನ್‌ಐವಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಇಲಾಖೆ ತಿಳಿಸಿದೆ.