KARNATAKA
ಕರ್ನಾಟಕದಲ್ಲಿ ಕರಾಳ ಸೋಮವಾರ, ಒಂದೇ ದಿನ 5 ದುರ್ಘಟನೆಗಳಲ್ಲಿ 10 ಜನ ನೀರುಪಾಲು..!
ಬೆಂಗಳೂರು, ನವೆಂಬರ್ 18: ರಾಜ್ಯಕ್ಕೆ ಕರಾಳ ಸೋಮವಾರವಾಗಿದ್ದು ಕರ್ನಾಟಕದಾದ್ಯಂತ ಇಂದು ಒಂದೇ ದಿನ ನೀರಲ್ಲಿ ಮುಳುಗಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಳಗಾವಿ, ವಿಜಯಪುರ, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಡೆದ ದುರ್ಘಟನೆಗಳಲ್ಲಿ ಜನ ಪ್ರಾಣ ಕಳಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. ಲಕ್ಷ್ಮಣರಾಮ (49), ರಮೇಶ್ (15), ಯಲ್ಲಪ್ಪ (13) ಮೃತ ದುರ್ದೈವಿಗಳು. ಮೀನು ಹಿಡಿಯಲು ಬಲೆ ಹಾಕಲು ತಂದೆ ಮತ್ತು ಮಕ್ಕಳು ನದಿಗೆ ಇಳಿದಿದ್ದಾರೆ. ಈ ವೇಳೆ ಓರ್ವ ಪುತ್ರ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾನೆ. ಆತನನ್ನು ರಕ್ಷಿಸಲು ಹೋಗಿದ್ದ ತಂದೆ ಮತ್ತು ಮತ್ತೊಬ್ಬ ಮಗ ಕೂಡ ನೀರುಪಾಲಾಗಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ, ಪೊಲೀಸ್, ಎನ್ಡಿಆರ್ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ರಮೇಶ್ ಅಂಬಲಿ, ಯಲ್ಲಪ್ಪ ಅಂಬಲಿ ಮೃತದೇಹ ಪತ್ತೆಯಾಗಿವೆ. ಲಕ್ಷ್ಮಣರಾಮ ಅವರಿಗಾಗಿ ಹುಡುಕಾಡ ಮುಂದುವರೆದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಬಳಿಯ ಕರೆಗೆ ಕಾಲು ಜಾರಿ ಬಿದ್ದ ಮಗಳನ್ನು ರಕ್ಷಣೆ ಮಾಡಲು ಹೋಗಿ ತಂದೆಯೂ ನೀರುಪಾಲಾಗಿದ್ದಾರೆ. ಇಬ್ಬರೂ ಬೆಂಗಳೂರಿನ ಶಿವಾಜಿನಗರದಿಂದ ತುಂಬಾಡಿ ಗ್ರಾಮದ ಸಂಬಂಧಿಕರ ಮನೆಗೆ ತೆರಳಿದ್ದರು. ತಂದೆ ಫಿರ್ದೋಸ್ (45), ಮಗಳು ಆಯಿಮಾ (6) ಮೃತ ದುರ್ದೈವಿಗಳು. ಕೆರೆ ನೋಡಲು ಹೋಗಿದ್ದ ವೇಳೆ ಮಗಳು ಕಾಲುಜಾರಿ ನೀರಿನೊಳಗೆ ಬಿದ್ದಿದ್ದಾಳೆ. ಮಗಳ ರಕ್ಷಣೆಗೆಂದು ಕೆರೆಗೆ ಇಳಿದಿದ್ದ ಫಿರ್ದೋಸ್ ಕೂಡ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕೊರಟಗೆರೆ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದರು.
ಯಾದಗಿರಿಯಲ್ಲಿ ಇಬ್ಬರು ಬಾಲಕರು ದನ ಮೇಯಿಸಲು ಹೋಗಿ ನೀರುಪಾಲಾಗಿದ್ದಾರೆ. ಸುರಪುರದ ದೇವತ್ಕಲ್ನ (10) ಯುವರಾಜ್ ಹಾಗೂ ಶ್ರೇಯಣ್ಣ (8) ಶಾಲೆಗೆ ರಜೆ ಇದ್ದ ಕಾರಣ ದನ ಮೇಯಿಸಲು ಹೋಗಿದ್ದರು. ಆದರೆ, ಊರ ಬಳಿಯ ಹಿರೇಹಳ್ಳದ ಬಳಿ ದನ ಮೇಯಿಸುತ್ತಿದ್ದಾಗ ಏಕಾಏಕಿ ಕಾಲು ಜಾರಿಬಿದ್ದು ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆ ಇಬ್ಬರ ಮೃತದೇಹ ಹೊರತೆಗೆದಿದ್ದಾರೆ.
ಹಾವೇರಿಯ ಶಿಗ್ಗಾಂವಿ ತಾಲೂಕಿನ ಚಂದಾಪುರ ತಾಂಡಾದಲ್ಲಿ 3 ವರ್ಷದ ಕಂದಮ್ಮ ನೀರಿನ ಬ್ಯಾರೆಲ್ಗೆ ಬಿದ್ದು ಪ್ರಾಣ ಬಿಟ್ಟಿದೆ. ಯಲ್ಲಮ್ಮ ಶಂಕರ್ ಲಮಾಣಿ ದಂಪತಿ ಮಗ ಆದಿತ್ಯನನ್ನ ಅಕ್ಕನ ಜತೆ ಬಿಟ್ಟು ಗದ್ದೆಗೆ ಹೋಗಿದ್ದರು. ಆದರೆ, ಮಗು ಆಟವಾಡುತ್ತಾ ಬ್ಯಾರೆಲ್ಗೆ ಬಿದ್ದು ಕಣ್ಮುಚ್ಚಿದೆ.
ಗರ್ಭಕೋಶ ತೆಗೆದಿದ್ದಕ್ಕೆ ಮಗು ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಂಡರಗಲ ಗ್ರಾಮದಲ್ಲಿ ನಡೆದಿದೆ. ಅಮೀರಾ (4) ರಿಹಾನಾ (24) ಮೃತ ದುರ್ದೈವಿಗಳು. ರಿಹಾನಾ ಇನಾಂದಾರ್ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ಅನಾರೋಗ್ಯದ ಕಾರಣ ವೈದ್ಯರು ರಿಹಾನಾ ಗರ್ಭಕೋಶ ತೆಗೆದಿದ್ದರು. ಮತ್ತೆ ಮಕ್ಕಳಾಗಲ್ಲ ಎಂದು ಮಾನಸಿಕವಾಗಿ ನೊಂದಿದ್ದ ರಿಹಾನಾ ನಾಲ್ಕು ವರ್ಷದ ಮಗಳು ಅಮೀರಾ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.