ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಇಂದು ಘೋಷಣೆ ?

ಬೆಂಗಳೂರು, ಮಾರ್ಚ್ 27 : ರಾಜಕೀಯ ಪಕ್ಷಗಳು ಬಿಟ್ಟ ಕಣ್ಣು ಬಿಟ್ಟಂತೆ ಕಾಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಇಂದೇ ಘೋಷಣೆಯಾಗುವ ಎಲ್ಲಾ ಸಾಧ್ಯತೆಗಳಿವೆ.

ಇಂದು ದೆಹಲಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓ.ಪಿ ರಾಹುತ್ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದು, ಚುನಾವಣೆ ಘೋಷಣೆ ಮಾಡುವ ಎಲ್ಲ ಸಾಧ್ಯತೆ ಇದೆ.

ಸುದ್ದಿಗೋಷ್ಠಿಯ ಮರುಘಳಿಗೆಯಿಂದಲೇ ನೀತಿಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ.

ಮೇ ಎರಡನೇ ವಾರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ಚುನಾವಣೆಗೆ ಅಂತಿಮ‌ ಸಿದ್ಧತೆ ಮಾಡಿಕೊಂಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮೊನ್ನೆಯಷ್ಟೇ ಮತಯಂತ್ರಗಳ ಸುರಕ್ಷತೆ ಕುರಿತಂತೆ ಕಾರ್ಯಾಗಾರ ಸಹ ನಡೆಸಿದ್ದರು.

ಪೆನ್ ಡ್ರೈವ್ ಸೇರಿದಂತೆ ಯಾವುದೇ ಉಪಕರಣ ಅಳವಡಿಸಿ ಮತಯಂತ್ರವನ್ನ ಹ್ಯಾಕ್ ಮಾಡಲು ಸಾಧ್ಯವಿಲ್ಲ.

ರಿಮೋಟ್ ರೀತಿ ಯಾರಿಂದಲೂ ಕಂಟ್ರೋಲ್​ ಸಾಧ್ಯವಿಲ್ಲ . ಹಲವು ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಲಾಗಿದ್ದು, ಮತಯಂತ್ರ ಸಾಗಿಸುವ ವಾಹನಕ್ಕೆ ಜಿಪಿಎಸ್ ಅಳವಡಿಸಿದೆ.

ಹೀಗಾಗಿ, ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದರು.

ಸಾಮಾನ್ಯವಾಗಿ ರಾಜ್ಯದಲ್ಲಿ ಒಂದೇ ಹಂತದ ಚುನಾವಣೆ ನಡೆಯುವುದು ವಾಡಿಕೆ.

ಈ ಬಾರಿಯೂ ಅದೇ ರೀತಿ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಮತಯಂತ್ರಗಳು ಸಹ ರಾಜ್ಯಕ್ಕೆ ಆಗಮಿಸಿದ್ದು, ಸ್ಟ್ರಾಂಗ್ ರೂಮ್​ನಲ್ಲಿ ಭದ್ರವಾಗಿವೆ.

ಮತಯಂತ್ರ ದೋಷದ ಆರೋಪ ಬಂದ ಹಿನ್ನೆಲೆಯಲ್ಲಿ ಈ ಸಲದಿಂದ ವಿವಿಪ್ಯಾಟ್ ಅಳವಡಿಸಲಾಗಿದ್ದು, ಮತದಾರರು ತಾವು ಹಾಕಿದ ಮತ ಯಾರಿಗೆ ಬಿದ್ದಿದೆ ಎಂಬುವುದನ್ನು ನೋಡುವ ಅವಕಾಶ ಕಲ್ಪಿಸಲಾಗಿದೆ.

ಅನುಮಾನಗಳು ಬಂದರೆ ದೂರು ಕೂಡ ನೀಡಬಹುದಾಗಿದೆ..

Facebook Comments

comments