KARNATAKA
ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ

ಬೆಂಗಳೂರು , ಏಪ್ರಿಲ್ 14: ಕನ್ನಡ ಚಿತ್ರರಂಗದ ಅಪರೂಪದ ಕಲಾವಿದ, ಹಾಸ್ಯ ನಟ ಬ್ಯಾಂಕ್ ಜನಾರ್ಧನ್ (77) ಅವರು ಇಂದು (ಏಪ್ರಿಲ್ 14) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಮಧ್ಯರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ನಟ ಬ್ಯಾಂಕ್ ಜನಾರ್ಧನ್ ಅವರ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಯೋಸಹಜ ಕಾಯಿಲೆ ಹಿನ್ನೆಲೆ ಕುಟುಂಬಸ್ಥರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ. ಇನ್ನು ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವಾದಂತಾಗಿದೆ. ತಮ್ಮ ಅದ್ಭುತ ಹಾಸ್ಯದಿಂದ ಜನರನ್ನು ರಂಜಿಸುವ ಮೂಲಕ ಭಾರೀ ಜನಮನ್ನಣೆ ಪಡೆದವರಾಗಿದ್ದರು.
ಕನ್ನಡ ಚಿತ್ರಗಂಗದಲ್ಲಿ ಪೋಷಕ ನಟನಾಗಿಯೇ ಗುರುತಿಸಿಕೊಳ್ಳುವ ಮೂಲಕ ಅವರು ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿನೆ ಮಾಡಿದವರಾಗಿದ್ದಾರೆ. 2023ರ ಸೆಪ್ಟಂಬರ್ 26ರಂದು ಹೃದಯಘಾತ ಆಗಿತ್ತು. ಬಳಿಕ ಚಿಕಿತ್ಸೆಯ ಪಡೆದುಕೊಂಡು ಚೇತರಿಸಿಕೊಂಡಿದ್ದರು.
1948ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಬೆಂಗಳೂರಿನಲ್ಲಿ ಜನಿಸಿದರು. 1985ರಲ್ಲಿ ಪಿತಾಮಹ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಜೀ ಬೂಂಬಾ, ಗಣೇಶ ಸುಬ್ರಮಣ್ಯ, ಕೌರವ ಸೇರಿದಂತೆ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಲ್ಲದೆ, ಬೆಟ್ಟದ ತಾಯಿ, ಪೊಲೀಸ್ ಹೆಂಡತಿ, ತರ್ಲೆ ನನ್ಮಗ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದರು. 2016ರಿಂದ ಈಚೆಗೆ ಅವರು ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. 2022ರ ಮಠ ಹಾಗೂ 2023ರ ಉಂಡೇನಾಮ ಚಿತ್ರದಲ್ಲಿ ನಟಿಸಿದ್ದರು.
ಹಿರಿತೆರೆ ಜೊತೆ ಕಿರುತೆರೆಯಲ್ಲಿಯೂ ಬ್ಯಾಂಕ್ ಜನಾರ್ಧನ್ ಕೆಲಸ ಮಾಡಿದ್ದಾರೆ. ಪಾಪ ಪಾಂಡು, ಜೋಕಾಲಿ, ರೋಬೋ ಫ್ಯಾಮಿಲಿ, ಮಾಂಗಲ್ಯ ಧಾರಾವಾಹಿಗಳಲ್ಲಿಯೂ ಕೂಡ ಬ್ಯಾಂಕ್ ಜನಾರ್ಧನ್ ಅವರು ನಟನೆ ಮಾಡಿದ್ದಾರೆ.
1948ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಬ್ಯಾಂಕ್ ಜನಾರ್ಧನ್ ಅವರು ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಯೇ ಮುಗಿಸಿದ್ದರು. ಬಳಿಕ ರಂಗಭೂಮಿ ಕಲಾವಿದರಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಗುರುತಿಸಿಕೊಂಡರು.
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡ ಇವರು ದೊಡ್ಡಣ್ಣ, ಟೆನ್ನಿಸ್ ಕೃಷ್ಣ ಅವರೊಂದಿಗೆ ಅಷ್ಟೇ ಅಲ್ಲದೆ, ನಳಿಕ ಹಾಸ್ಯನಟರಾದ ಸಾಧುಕೋಕಿಲ, ಬುಲೆಟ್ ಪ್ರಕಾಶ್ ಸೇರಿದಂತೆ ಹಲವರೊಂದಿಗೆ ನಟಿಸಿ ತಮ್ಮ ಛಾಪು ಮೂಡಿಸಿದ್ದರು.
ಜನಾರ್ಧನ್ ಅವರಿಗೆ ಬ್ಯಾಂಕ್ ಜನಾರ್ಧನ್ ಎಂದು ಹೆಸರು ಬರಲು ಕಾರಣ ಏನೆಂದರೆ, ಅವರು ಚಿತ್ರದುರ್ಗದ ಸಮೀಪದ ಹೊಳಲ್ಕೆರೆ ಬಳಿಯ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಆಗಲೇ, ಅವರಿಗೆ ಕಲೆಯ ಬಗ್ಗೆ ಆಸಕ್ತಿ ಇತ್ತು. ಆದ್ದರಿಂದ ನಾಟಕಗಳನ್ನು ಮಾಡಿಕೊಂಡಿದ್ದರು.
ಅವರ ನಾಟಕವನ್ನು ನೋಡಿ ಧೀರೇಂದ್ರ ಗೋಪಾಲ್ ಅವರು ತುಂಬಾ ಇಷ್ಟಪಟ್ಟಿದ್ದರು. ಅಲ್ಲದೆ, ಅವರನ್ನು ಬೆಂಗಳೂರಿಗೆ ಬರುವಂತೆ ಅವರು ಹೇಳಿದ್ದರು. ಒಂದೂವರೆ ವರ್ಷ ಬಿಟ್ಟು ಜನಾರ್ಧನ್ ಅವರು ಬೆಂಗಳೂರಿಗೆ ಬಂದು ಊರಿಗೆ ಉಪಕಾರಿ ಸಿನಿಮಾದಲ್ಲಿ ವಜ್ರಮುನಿ ಬಾಡಿಗಾರ್ಡ್ ಪಾತ್ರ ಮಾಡಿದರು.
ಹಿಗೇ ಮೊದಲಿಗೆ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಅವರು ದಿನಕಳೆದಂತೆ ದೊಡ್ಡಮಟ್ಟದಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಗುರುತಿಸಿಕೊಳ್ಳುತ್ತಾ ಹೋದರು. ಈ ಮೂಲಕ ಅವರಿಗೆ ಬೇಡಿಕೆಯೂ ಹೆಚ್ಚಾಗುತ್ತಾ ಹೋಯಿತು.
1 Comment