ಅಪಘಾತದಲ್ಲಿ ಶಿಕ್ಷಕಿ ಸಾವಿಗೆ ಕಾರಣನಾದ ಆರೋಪಿ ಲಾರಿ ಚಾಲಕನಿಗೆ 14 ದಿನ ನ್ಯಾಯಾಂಗ ಬಂಧನ

ಮಂಗಳೂರು ಡಿಸೆಂಬರ್ 2: ನಿನ್ನೆ ಮಂಗಳೂರು ನಗರದ ಕದ್ರಿ ಕಂಬಳದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಾಲಾ ಶಿಕ್ಷಕಿ ಶೈಲಾಜಾ ರಾವ್ ಸಾವಿಗೆ ಕಾರಣನಾದ ಲಾರಿ ಡ್ರೈವರ್ ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಅಪಘಾತವಾಗಿದ್ದು, ಈ ಹಿನ್ನಲೆಯಲ್ಲಿ ಈ ಆದೇಶ ನೀಡಿದ್ದು, ಮೋಟಾರ ವಾಹನ ಕಾಯ್ದೆ ತಿದ್ದುಪಡಿ ನಂತರದ ಈ ರೀತಿಯ ಆದೇಶ ಬಂದಿರುವ ಮೊದಲ ಪ್ರಕರಣ ಇದಾಗಿದೆ.

ನಿನ್ನೆ ಕದ್ರಿ ಕಂಬಳ ರಸ್ತೆಯಲ್ಲಿ ನಡೆದ ಅಪಘಾತ ಇದಾಗಿದ್ದು, ಗೂಡ್ಸ್ ಲಾರಿ- ಆಟೋ ರಿಕ್ಷಾ ಭೀಕರ ಅಪಘಾತದಲ್ಲಿ ಶಾಲಾ ಶಿಕ್ಷಕಿ ಶೈಲಾಜಾ ರಾವ್ ಧಾರುಣವಾಗಿ ಮೃತಪಟ್ಟು, ಆಟೋ ಚಾಲಕ ಗಂಭೀರ ಗಾಯಗೊಂಡಿದ್ದರು. ಅಪಘಾತ ಸಿಸಿಟಿವಿ ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಲಾರಿ ಚಾಲಕ ಅಜಾರಗರೂಕತೆ ಹಾಗೂ ಅತೀವೇಗ ಅಪಘಾತ ಕಾರಣವಾಗಿತ್ತು.

ಈ ಹಿನ್ನಲೆಯಲ್ಲಿ ಆರೋಪಿ ಲಾರಿ ಚಾಲಕ ಸಿದ್ದಲಿಂಗನ ಗೌಡ ವಿ. ಪೊಲೀಸ್ ಪಾಟೀಲನನ್ನು ಕದ್ರಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.