Connect with us

    LATEST NEWS

    ಕೊರಗ ಸಮುದಾಯದೊಂದಿಗೆ ಚೆಲ್ಲಾಟವಾಡುವ ಐಟಿಡಿಪಿ ಇಲಾಖೆಯ ಧೋರಣೆ ಸಹಿಸಲಸಾಧ್ಯ; ಸುನಿಲ್ ಕುಮಾರ್ ಬಜಾಲ್

    ಮಂಗಳೂರು:  ಆದಿವಾಸಿ ಕೊರಗ ಸಮುದಾಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡುವ ಐಟಿಡಿಪಿ ಇಲಾಖೆಯ ಧೋರಣೆ ಸಹಿಸಲಸಾಧ್ಯ ಎಂದು ಸಿಐಟಿಯು ಕಾರ್ಮಿಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದ್ದಾರೆ.

    ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೆರೆಕಾಡು ಘಟಕದ ನೇತೃತ್ವದಲ್ಲಿ ಕೊಟ್ಟಾರದಲ್ಲಿರುವ ಐಟಿಡಿಪಿ ಕಛೇರಿಯ ಎದುರು ವಸತಿ ಯೋಜನೆಯ ಫಲಾನುಭವಿಗಳಿಗೆ ಕಳೆದ 8 ತಿಂಗಳಿನಿಂದ ಸಹಾಯಧನದ ಕಂತು ಬಿಡುಗಡೆ ಮಾಡದೆ ಸತಾಯಿಸುತ್ತಿರುವುದರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಆದಿವಾಸಿ ಬುಡಕಟ್ಟು ಸಮುದಾಯಗಳ ಶ್ರಯೋಭಿವೃದ್ಧಿಗಾಗಿ ಸದಾ ಶ್ರಮಿಸಬೇಕಾಗಿದ್ದ ಐಟಿಡಿಪಿ ಇಲಾಖೆಯು ತನ್ನ ಸಂವಿಧಾನ ಕರ್ತವ್ಯವನ್ನು ಮರೆತು ಜನ ವಿರೋಧಿಯಾಗಿ ವರ್ತಿಸುತ್ತಿದೆ.ಸಮಗ್ರವಾಗಿ ಐಟಿಡಿಪಿ ಇಲಾಖೆಯ ಕಾರ್ಯವೈಖರಿ ಬದಲಾಗಬೇಕು.ಆದಿವಾಸಿ ಕೊರಗ ಸಮುದಾಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಐಟಿಡಿಪಿ ಇಲಾಖೆಯ ಧೋರಣೆಯು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ DYFI ಜಿಲ್ಲಾಧ್ಯಕ್ಷರಾದ ಜಿ.ಕೆ.ಇಮ್ತಿಯಾಜ್ ರವರು, ಅತ್ಯಂತ ಶೋಷಿತ ಸಮುದಾಯವಾದ ಕೊರಗ ಸಮುದಾಯದ ಬದುಕನ್ನು ಉತ್ತಮ ಪಡಿಸಲು ಪ್ರಾಮಾಣಿಕ ಪ್ರಯತ್ನ ಪಡಬೇಕಾದ ಸರಕಾರಗಳು ಅವರ ಹಕ್ಕನ್ನು ಕಸಿಯಲು ಹೊರಟಿರುವುದು ತೀರಾ ಖಂಡನೀಯವಾಗಿದೆ ಎಂದು ಸರಕಾರಗಳನ್ನು ತೀವ್ರವಾಗಿ ಟೀಕಿಸಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮಿತಿಯ ಗೌರವ ಸಲಹೆಗಾರರಾದ ಯೋಗೀಶ್ ಜಪ್ಪಿನಮೊಗರುರವರು ಮಾತನಾಡುತ್ತಾ,ಕೆರೆಕಾಡು ಪ್ರದೇಶದ ಕೊರಗ ಸಮುದಾಯದ ಮನೆ ನಿರ್ಮಾಣಕ್ಕೆ ಸಂಬಂಧಿಸಿ ಕಳೆದ 14 ತಿಂಗಳಿನಿಂದ ನೀಡಬೇಕಾದ ಸರಕಾರದ ಹಣವನ್ನು ವಿನಃ ಕಾರಣ ವಿಳಂಬಗೊಳಿಸುವ ಮೂಲಕ ಆದಿವಾಸಿ ವಿರೋಧಿ ಮನೋಭಾವವನ್ನು ತಳೆದಿರುವ ITDP ಯೋಜನೆಯ ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

    ಪ್ರತಿಭಟನೆಯನ್ನು ಉದ್ದೇಶಿಸಿ ಆದಿವಾಸಿ ಹಕ್ಕುಗಳ ಸಮಿತಿಯ ನಾಯಕರಾದ ಕರಿಯ ಕೆ,ಕೃಷ್ಣ ಇನ್ನ , ರಶ್ಮಿ ವಾಮಂಜೂರು, ತುಳಸಿ ಪಡುಬಿದ್ರಿಯವರು ಮಾತನಾಡುತ್ತಾ ITDP ಯೋಜನೆಯ ಬೇಜಾವಬ್ದಾರಿತನವನ್ನು ಟೀಕಿಸಿದರು.

    ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಅಶೋಕ್ ಶ್ರೀಯಾನ್, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಾಯಕರಾದ ಶೇಖರ್ ವಾಮಂಜೂರು, ಕೆರೆ ಕಾಡು ಘಟಕದ ಮುಖಂಡರಾದ ಅಭಿಜಿತ್,ಶಶಿಧರ್ ,ಕೇಶವ, ಮನೋಹರ್, ರಮೇಶ್ ಕೆರೆಕಾಡು ರವೀಂದ್ರ, ಕಿಶನ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಂಗಳೂರಿನ ಉಪಾಧ್ಯಕ್ಷರಾದ ಪ್ರಶಾಂತ್ ಕಂಕನಾಡಿ,ನವೀನ್ ಕಂಕನಾಡಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಹಿಳಾ ಮುಖಂಡರಾದ ನಿಶ್ಚಿತ, ಮಂಜುಳಾ, ಪೂರ್ಣಿಮಾ, ಶ್ವೇತ, ಸುಶೀಲ ಮುಂತಾದವರು ಹೋರಾಟದ ನೇತೃತ್ವವನ್ನು ವಹಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply