LATEST NEWS
ಹಿಜಬ್ ವಿವಾದವೇ ದೇವಸ್ಥಾನದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮಾಡಿದ್ದು – ಶರಣ್ ಪಂಪ್ ವೆಲ್
ಮಂಗಳೂರು ಸೆಪ್ಟೆಂಬರ್ 12: ಕರಾವಳಿಯಲ್ಲಿ ಎಷ್ಟೇ ಪ್ರತಿಭಟನೆ ಬಂದ್ ನಡೆದರೂ ಮಂಗಳೂರಿನ ದಕ್ಕೆಯಲ್ಲಿ ಮೀನು ವ್ಯಾಪಾರ ನಿರಾತಂಕವಾಗಿ ನಡೆಯುತ್ತಿತ್ತು, ಆದರೆ ಹಿಜಾಬ್ ವಿವಾದದ ಸಂದರ್ಭದಲ್ಲಿ ದಕ್ಕೆಯಲ್ಲಿ ಮೀನು ವ್ಯಾಪಾರ ಬಂದ್ ಮಾಡಲಾಗಿತ್ತು, ಇದು ಹಿಂದೂ ಗಳು ಎಚ್ಚೆತ್ತುಕೊಳ್ಳಲು ಕಾರಣವಾಗಿದ್ದು ಎಂದು ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಸಂಚಾಲಕ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶರಣ್ ಪಂಪ್ ವೆಲ್ ಎರಡು ಮೂರು ವರ್ಷಗಳ ಹಿಂದೆ ನಮ್ಮ ಜಿಲ್ಲೆ, ರಾಜ್ಯದಲ್ಲಿ ಈ ರೀತಿಯ ವಾತಾವರಣ ಇರಲಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಭಾವವಿಲ್ಲದೆ ಎಲ್ಲರೂ ಎಲ್ಲ ಕಡೆ ವ್ಯಾಪಾರ ಮಾಡುತ್ತಿದ್ದರು.
ಆದರೆ ಶಾಲಾ ಕಾಲೇಜುಗಳಲ್ಲಿ ಪ್ರಾರಂಭವಾದ ಹಿಜಬ್ ಗಲಾಟೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತು. ಹಿಜಾಬ್ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಂದ್ ಕರೆ ಕೊಟ್ಟಾಗ ಹಾಲು , ಮೆಡಿಕಲ್ ಶಾಪ್, ಮೀನು ವ್ಯಾಪಾರ ಮುಚ್ಚಿತು. ದಕ್ಕೆಯಲ್ಲಿ ಮೊದಲ ಬಾರಿ ಮೀನು ವ್ಯಾಪಾರ ಬಂದ್ ಆಗಿತ್ತು. ಆದರೆ ಹಿಂದೆ ಯಾವುದೇ ವಿಚಾರಕ್ಕೆ ಬಂದ್ ಆದರೆ ಹಾಲು, ಮೆಡಿಕಲ್, ಮೀನು ವ್ಯಾಪಾರ, ಪೇಪರ್ ವ್ಯಾಪಾರ ಬಂದ್ ಆಗಿರಲಿಲ್ಲ. ದಕ್ಕೆಯಲ್ಲಿ ಮೀನು ವ್ಯಾಪಾರ ಬಂದ್ ಆಗಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಹಿಂದುಗಳು ಎಚ್ಚೆತ್ತುಕೊಂಡರು.
ಅದರ ಬಳಿಕ ದೇವಸ್ಥಾನದ ಬಳಿ ಹಿಂದುಗಳು ಅಲ್ಲದವರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂಬ ಸಂದೇಶವನ್ನು ಹಿಂದುಗಳು ನೀಡಿದರು. ದೇವಸ್ಥಾನದ ಆಡಳಿತ ಮಂಡಳಿ ಈ ನಿರ್ಧಾರ ಮಾಡಿದರು. ಆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಹುಟ್ಟಿಕೊಂಡಿದೆ ಎಂದರು. ನಾವು ಮುಸಲ್ಮಾನರ ವಿರೋಧಿಗಳಲ್ಲ. ಆದರೆ ಯಾರಾದರೂ ಹಿಂದೂ ವ್ಯಾಪಾರಸ್ಥರಿಗೆ ಅಂಗಡಿ ಹಾಕುವುದಕ್ಕೆ ಅಡ್ಡಿಪಡಿಸಿದರೆ ರಕ್ಷಣೆಗೆ ವಿಶ್ವಹಿಂದೂ ಪರಿಷತ್, ಬಜರಂಗ ದಳದವರು ಇದ್ದಾರೆ ಎಂದು ಹೇಳಿದರು.