LATEST NEWS
ಉಡುಪಿ ಮೂಲದ ಖಡಕ್ ಐಪಿಎಸ್ ಆಫೀಸರ್ ಮಧುಕರ್ ಶೆಟ್ಟಿ ಆರೋಗ್ಯ ಸ್ಥಿತಿ ಗಂಭೀರ

ಉಡುಪಿ ಮೂಲದ ಖಡಕ್ ಐಪಿಎಸ್ ಆಫೀಸರ್ ಮಧುಕರ್ ಶೆಟ್ಟಿ ಆರೋಗ್ಯ ಸ್ಥಿತಿ ಗಂಭೀರ
ಬೆಂಗಳೂರು, ಡಿಸೆಂಬರ್ 27: ರಾಜ್ಯದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ಎಚ್1 ಎನ್1 ಸೋಂಕಿನಿಂದ ಬಳಲುತ್ತಿರುವ ಮಧುಕರ್ ಶೆಟ್ಟಿ ಅವರಿಗೆ ಹೈದರಾಬಾದದ್‌ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಿರಿಯ ಪತ್ರಕರ್ತ ಹಾಗೂ ಮುಂಗಾರು ಪತ್ರಿಕೆಯ ಸಂಪಾದಕರಾಗಿದ್ದ ದಿವಂಗತ ವಡ್ಡರ್ಸೆ ರಘುರಾಮಶೆಟ್ಟಿ ಅವರ ಪುತ್ರರಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು. 1999ರ ಬ್ಯಾಚ್(ಕರ್ನಾಟಕ ಕೇಡರ್)ನಲ್ಲಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದವರು.

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ)ದ ಪರೀಕ್ಷೆ ಕೈಗೊಳ್ಳುವ ಮುನ್ನ ಹೊಸದಿಲ್ಲಿಯ ಜವಾಹರ್‌ಲಾಲ್ ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ಸಮಾಜ ಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಅಲ್ಲದೆ, ನ್ಯೂಯಾರ್ಕ್‌ನ ಅಲ್ಬಾನಿಯಲ್ಲಿರುವ ರಾಕ್‌ಫೆಲ್ಲರ್ ಕಾಲೇಜ್ ಆಫ್ ಪಬ್ಲಿಕ್ ಅಫೇರ್ಸ್ ಅಂಡ್ ಪಾಲಿಸಿ ವಿಶ್ವವಿದ್ಯಾಲಯ ದಿಂದ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ.
ಉನ್ನತ ಮೂಲಗಳ ಮಾಹಿತಿ ಪ್ರಕಾರ ಕಳೆದ ಕೆಲ ದಿನಗಳಿಂದ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಶೆಟ್ಟಿ ಅವರ ಚಿಕಿತ್ಸೆಯ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಕ್ಷಣಕ್ಷಣದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ತೆಗೆ ತೆಲಂಗಾಣ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮುಖ್ಯ ಕಾರ್ಯದರ್ಶಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕರ್ನಾಟಕ ಸರಕಾರ ಈಗಾಗಲೇ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿಯವರನ್ನು ಚಿಕಿತ್ಸೆ ಮೇಲ್ವಿಚಾರಣೆಗೆ ನೇಮಿಸಲಾಗಿದೆ. ಮಧುಕರ್ ಶೆಟ್ಟಿ ಅವರ ಶ್ವಾಸಕೋಶಕ್ಕೆ ಸೋಂಕು ತಗುಲಿದೆ ಎನ್ನಲಾಗಿದೆ.
ಮಧುಕರ್ ಶೆಟ್ಟಿ ಎಚ್1ಎನ್1ನಿಂದ ಬಳಲುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೃದಯ ಶ್ವಾಸಕೋಶ ಚಿಕಿತ್ಸೆ ನಡೆಸಲಾಗಿದ್ದು, ಇದರಿಂದ ಸ್ವಲ್ಪ ಚೇತರಿಸಿಕೊಂಡಿದ್ದರು, ಆದರೆ ಮತ್ತೊಮ್ಮೆ ಹೃದಯದ ಶ್ವಾಸಕೋಶ ಯಂತ್ರ ಬದಲಿಸುವ ಪ್ರಯತ್ನ ವಿಫಲಗೊಂಡಿದ್ದು ತೀವ್ರ ರಕ್ತಸ್ರಾವ ಉಂಟಾಗಿದೆ. ಸದ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.