ರಾಮಮಂದಿರ ಬಗ್ಗೆ ನಮ್ಮ ಅಪೇಕ್ಷೆ ತಿಳಿಸಿದ್ದೆವೆ ರಾಷ್ಟ್ರಪತಿಗಳು ನಗುವಿನ ಮೂಲಕ ಉತ್ತರಿಸಿದ್ದಾರೆ- ಪೇಜಾವರ ಶ್ರೀ

ಉಡುಪಿ ಡಿಸೆಂಬರ್ 27: ರಾಮಂದಿರ ನಿರ್ಮಾಣದ ಬಗ್ಗೆ ರಾಷ್ಟ್ರಪತಿಗಳಿಗೆ ನಮ್ಮ ಅಪೇಕ್ಷೆ ಏನು ಅನ್ನುವುದನ್ನು ತಿಳಿಸಿದ್ದೇನೆ ಅವರು ನಗುವಿನ ಮೂಲಕ ಉತ್ತರಿಸಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ತಿಳಿಸಿದ್ದಾರೆ.

ಪೇಜಾವರ ಶ್ರೀ ಸನ್ಯಾಸ ದೀಕ್ಷೆ ಸ್ವೀಕರಿಸಿ 80 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪೇಜಾವರ ಶ್ರೀಗಳಿಗೆ ಇಂದು ಅಭಿನಂದನೆ ಸಲ್ಲಿಸಿದರು.

ಇಂದು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿಗಳು ಅಲ್ಲಿಂದ ವಾಯುಸೇನಾ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆದಿ ಉಡುಪಿ ಹೆಲಿಪ್ಯಾಡ್‌ಗೆ ಬೆಳಗ್ಗೆ 11:35ಕ್ಕೆ ಬಂದಿಳಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಅವರ ಪತ್ನಿ ಸವಿತಾ ಕೋವಿಂದ ಅವರನ್ನ ಹೆಲಿಪ್ಯಾಡ್‌ನಲ್ಲಿ ಜಿಲ್ಲಾಡಳಿತ ವತಿಯಿಂದ ಸ್ವಾಗತಿಸಲಾಯಿತು.

ನಂತರ ಕರಾವಳಿ ಜಂಕ್ಷನ್, ಬನ್ನಂಜೆ, ಕಲ್ಸಂಕ ಮಾರ್ಗವಾಗಿ 11:50ಕ್ಕೆ ರಥಬೀದಿ ಪೇಜಾವರ ಮಠಕ್ಕೆ ರಾಷ್ಟ್ರಪತಿಗಳು ಆಗಮಿಸಿದರು. ಪೇಜಾವರ ಮಠದ ವತಿಯಿಂದ ದಿವಾನ ರಘುರಾಮ ಆಚಾರ್ಯ ರಾಷ್ಟ್ರಪತಿಗಳನ್ನು ಸ್ವಾಗತಿಸಿದರು.

ಬಳಿಕ ಪೇಜಾವರ ಮಠಕ್ಕೆ ತೆರಳಿ ಪೇಜಾವರ ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು. ನಂತರ ಸ್ವಾಮೀಜಿ ಅವರೊಂದಿಗೆ ಉಭಯ ಕುಶಲೋಪರಿ ನಡೆಸಿದ ರಾಷ್ಟ್ರಪತಿಗಳು ಸಮಾಜಕ್ಕೆ ನಿಮ್ಮ ಮಾರ್ಗದರ್ಶನ ಅವಶ್ಯವಾಗಿ ಬೇಕಿದೆ. ಉಡುಪಿಗೆ, ಪೇಜಾವರ ಮಠಕ್ಕೆ ಆಗಮಿಸಿ ನಿಮ್ಮನ್ನು ಭೇಟಿ ಮಾಡಿದ್ದು ಅತೀವ ಸಂತಸ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಗಳು ರಾಷ್ಟ್ರಪತಿಗಳಿಗೆ ಹಟ್ಟೆ ಪ್ರಭಾವಳಿ, ಕಂಚಿನ ಕೃಷ್ಣನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರು. ಪೇಜಾವರ ಶ್ರೀಗಳು ಬರೆದ 12 ಧಾರ್ಮಿಕ ಪುಸ್ತಕಗಳು ನೀಡಿ ಶಾಲು ಹಾಕಿ ರಾಷ್ಟ್ರಪತಿಗಳನ್ನು ಗೌರವಿಸಲಾಯಿತು. ರಾಷ್ಟ್ರಪತಿ ಅವರ ಪತ್ನಿ ಸವಿತಾ ಕೋವಿಂದ ಅವರಿಗೆ ಸೀರೆ ಮತ್ತು ಶಂಕರಪುರ ಮಲ್ಲಿಗೆ ನೀಡಲಾಯಿತು.

ಪೇಜಾವರ ಮಠದಿಂದ ಶ್ರೀ ಕೃಷ್ಣ ದರ್ಶನಕ್ಕೆ ತೆರಳಿದ ಶ್ರೀಗಳು ದೇವರ ದರ್ಶನ ಪಡೆದು, ಪರ್ಯಾಯ ಪಲಿಮಾರು ಶ್ರೀಗಳಿಂದ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಪಲಿಮಾರು ಮಠದ ವತಿಯಿಂದ 1.5 ಅಡಿ ಎತ್ತರದ ಕಡೆಗೋಲು ಶ್ರೀಕೃಷ್ಣ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಯಿತು.

ಬಳಿಕ ರಾಷ್ಟ್ರಪತಿಗಳು 12:50ಕ್ಕೆ ಉಡುಪಿಯಿಂದ ನಿರ್ಗಮಿಸಿದರು. ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ವಾಪಸಾದರು.

Facebook Comments

comments