LATEST NEWS
ಇಂಡೋನೇಷ್ಯಾದ ಪ್ರಮುಖ ಕರಾವಳಿ ದ್ವೀಪ ಬಾಲಿಯಲ್ಲಿ ಭೂಕಂಪ – 91ಕ್ಕೂ ಹೆಚ್ಚು ಸಾವು

ಇಂಡೋನೇಷ್ಯಾದ ಪ್ರಮುಖ ಕರಾವಳಿ ದ್ವೀಪ ಬಾಲಿಯಲ್ಲಿ ಭೂಕಂಪ – 91ಕ್ಕೂ ಹೆಚ್ಚು ಸಾವು
ಇಂಡೋನೇಷ್ಯಾ ಅಗಸ್ಟ್ 6: ಇಂಡೋನೇಷ್ಯಾದ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಲಂಬೋಕ್ನ ಕರಾವಳಿ ದ್ವೀಪದಲ್ಲಿ ಭೂಕಂಪ ಸಂಭವಿಸಿದ್ದು, 91ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲಾಗಿದ್ದು, ನೂರಾರು ಕಟ್ಟಡಗಳು ಧರೆಗುರುಳಿವೆ.
ಆಗ್ನೇಯ ಏಷ್ಯಾದ ಪ್ರಮುಖ ಪ್ರವಾಸಿ ತಾಣ ಇಂಡೋನೇಷ್ಯಾದ ಪ್ರಮುಖ ಕರಾವಳಿ ದ್ವೀಪ ಬಾಲಿಯಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ತೀವ್ರತೆಗೆ ಬಾಲಿ ಸೇರಿದಂತೆ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿನ ಬಹುಮಹಡಿ ಕಟ್ಟಡಗಳು ನೆಲಕ್ಕುರುಳಿದ್ದು, ಈ ವೇಳೆ ಕನಿಷ್ಠ 91 ಮಂದಿ ಸಾವನ್ನಪ್ಪಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಂತೆಯೇ ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಸಾಕಷ್ಟು ಪ್ರವಾಸಿಗರು ಕಟ್ಟಡಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಸಾವಿರಾರು ಕಟ್ಟಡಗಳು ಕೂಡ ಜಖಂಗೊಂಡಿವೆ. ಈ ಭೂಕಂಪನದ ತೀವ್ರತೆಗೆ ಬಾಲಿಯ ಸುತ್ತಮುತ್ತಲ ಪ್ರದೇಶಗಳ ಬಹುಮಹಡಿ ಕಟ್ಟಡಗಳು ನೆಲ ಸಮವಾಗಿವೆ.
ನಿನ್ನೆ ಸಂಜೆಯೇ ಸುನಾಮಿಯ ಸೂಚನೆ ಬಂದಿದ್ದರಿಂದ ಪ್ರವಾಸಿಗರು ಆತಂಕಕ್ಕೀಡಾಗಿದ್ದರು. ಆದರೆ, ಸುನಾಮಿಯ ಸಾಧ್ಯತೆಯಿಲ್ಲ ಎಂದು ರಾತ್ರಿ ತಿಳಿಸಲಾಗಿದ್ದರಿಂದ ಪ್ರವಾಸಿಗರು ಕೊಂಚ ನಿರಾಳರಾಗಿದ್ದರು. ಬೆಳಗ್ಗೆ ಭೂಕಂಪ ಸಂಭವಿಸಿ ಮತ್ತೊಂದು ರೀತಿ ಅನಾಹುತ ಸಂಭವಿಸಿದಂತಾಗಿದೆ.
ಘಟನೆ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಇಂಡೋನೇಷ್ಯಾ ಸೇನೆ, ಸ್ಥಳೀಯ ಅಗ್ನಿಶಾಮಕ ದಳಗಳು, ನೈಸರ್ಗಿಕ ವಿಕೋಪ ನಿರ್ವಹಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಭೂಕಂಪದ ನಂತರವೂ ಕೆಲವು ಭಾಗಗಳಲ್ಲಿ ಲಘುಕಂಪನ ಉಂಟಾಗಿದೆ.
ಪ್ರಸ್ತುತ ಸಂಭವಿಸಿರುವ ಭೂಕಂಪನದಿಂದಾಗಿ ಸಂಭಾವ್ಯ ಸುನಾಮಿ ಕುರಿತು ಹವಾಮಾನ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವರೆಗೂ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿಲ್ಲವಾದರೂ, ಸಮುದ್ರತೀರ ಪ್ರದೇಶಗಳ ಜನರು ಮುಂಜಾಗೃತಾ ಕ್ರಮವಾಗಿ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದಾರೆ.