KARNATAKA
ಭಾರತದಲ್ಲಿ ಅಪರೂಪದ ದೈತ್ಯ ಬಿಳಿ ಹೆಬ್ಬಾವು ಕುಮಟಾದಲ್ಲಿ ಪತ್ತೆ..!

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಭಾರತದಲ್ಲಿ ಅತೀ ದೊಡ್ಡ ಅಪರೂಪದ ಬಿಳಿ ಹೆಬ್ಬಾವು ಕುಮಟಾದಲ್ಲಿ ಪತ್ತೆಯಾಗಿದೆ.
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಭಾರತದಲ್ಲಿ ಅತೀ ದೊಡ್ಡ ಅಪರೂಪದ ಬಿಳಿ ಹೆಬ್ಬಾವು ಕುಮಟಾದಲ್ಲಿ ಪತ್ತೆಯಾಗಿದೆ.

ಇದು ಕುಮಟಾದಲ್ಲಿ 2 ನೇ ಬಾರಿ ಪತ್ತೆಯಾದ ಬಿಳಿ ಹೆಬ್ಬಾವು ಆಗಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾದ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎಂಬವರ ಮನೆಯ ಅಂಗಳದಲ್ಲಿ ಮಂಗಳವಾರ ಈ ಬಿಳಿ ಹೆಬ್ಬಾವು ಕಾಣಿಸಿಕೊಂಡಿದೆ.
ಇದೇ ಮೊದಲ ಬಾರಿಗೆ ಶುಭ್ರ ಬಿಳಿ ಬಣ್ಣದ ಹಾವು ಕಂಡು ಆತಂಕಗೊಂಡ ಮನೆಯವರು ತಕ್ಷಣವೇ ಮನೆ ಸಮೀಪದ ಹೋಮ್ ಗಾರ್ಡ್ ಗಣೇಶ ಮುಕ್ರಿ ಮೂಲಕ ಉರಗ ತಜ್ಞ ಪವನ್ ನಾಯ್ಕರನ್ನು ಸಂಪರ್ಕಿಸಿದ್ದರು. ರಾತ್ರಿ 12 ಗಂಟೆಯ ವೇಳೆ ಸ್ಥಳಕ್ಕಾಗಮಿಸಿದ ಅವರು, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದರು.
ಕಳೆದ ವರ್ಷವೂ ಮಿರ್ಜಾನ್ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು, ರಾತ್ರಿ ವೇಳೆ ಪವನ್ ನಾಯ್ಕ ರಕ್ಷಣೆ ಮಾಡಿದ್ದರು. ಈ ಹೆಬ್ಬಾವಿನ ಮೈಬಣ್ಣ ಬಿಳಿಯಾಗಿರುವುದು ಸಾಕಷ್ಟು ಸುದ್ದಿಯಾಗಿ ವಿಡಿಯೋ, ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದವು.
ಇದೀಗ ಕಳೆದ ವರ್ಷ ಸಿಕ್ಕ ಹೆಬ್ಬಾವಿಗಿಂತಲೂ 3 ಪಟ್ಟು ದೊಡ್ಡದಾದ ಹೆಬ್ಬಾವು ಹೆಗಡೆಯಲ್ಲಿ ಪತ್ತೆಯಾಗಿದೆ. “ಇದು ಸಾಮಾನ್ಯ ಹೆಬ್ಬಾವಿನ ಜಾತಿಗೆ ಸೇರಿದೆ. ಚರ್ಮಕ್ಕೆ ಬಣ್ಣ ನೀಡುವ ವರ್ಣದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ನ ಕೊರತೆಯಿಂದ ಬಿಳಿ ಬಣ್ಣ ಹೊಂದಿದೆ. ಇದನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ.
ಆದರೆ ಅಲ್ಬಿನೋ ಹಾವುಗಳಾದರೆ ಕಣ್ಣು ಕೂಡಾ ಕೆಂಪು ಮಿಶ್ರಿತ ಬಿಳಿ ಬಣ್ಣದಲ್ಲೇ ಇರಬೇಕಾಗುತ್ತದೆ”.”ಇದರ ಕಣ್ಣಿನ ಅರ್ಧಭಾಗ ಮಾತ್ರ ಬಿಳಿ ಇದ್ದು, ಇನ್ನರ್ಧ ಕಪ್ಪಿರುವ ಕಾರಣಕ್ಕೆ ಇದನ್ನು ಅಲ್ಬಿನೋ ಹಾವಿನ ಗುಂಪಿಗೆ ಸೇರಿಸಲು ಸಾಧ್ಯವಿಲ್ಲ. ಇಂತಹ ಹಾವುಗಳು ಹುಟ್ಟಿದ ಬಳಿಕ ಹೆಚ್ಚು ದಿನ ಬದುಕುವುದು ಕಷ್ಟ.
ಬಿಳಿಯಾಗಿರುವ ಕಾರಣಕ್ಕೆ ಸುಲಭವಾಗಿ ಇತರೆ ಪ್ರಾಣಿ, ಹಾವುಗಳ ದಾಳಿಯಿಂದ ಸಾಯುವ ಸಾಧ್ಯತೆ ಹೆಚ್ಚು. ಈ ಹಾವು ಸುಮಾರು 9 ಅಡಿ ಉದ್ದವಿದ್ದು, ಅಂದಾಜು 8 ವರ್ಷವಾಗಿರಬಹುದು” ಎಂದು ಪವನ್ ನಾಯ್ಕ ಮಾಹಿತಿ ನೀಡಿದ್ದಾರೆ.
“ಬಿಳಿ ಹೆಬ್ಬಾವು ಕರ್ನಾಟಕದಲ್ಲಿ ಮೂರನೇ ಬಾರಿ ರಕ್ಷಣೆಯಾಗಿದೆ. ಈ ಪೈಕಿ 2 ಬಾರಿ ಕುಮಟಾದಲ್ಲೇ ಸಿಕ್ಕಿದೆ. ಮೊದಲ ಸಲ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಪತ್ತೆಯಾಗಿತ್ತು. ಭಾರತದಲ್ಲೆಲ್ಲೂ ಇಷ್ಟೊಂದು ಉದ್ದದ ಬಿಳಿ ಹೆಬ್ಬಾವು ಪ್ರತ್ಯಕ್ಷವಾದ ಮಾಹಿತಿ ಇಲ್ಲ.
ಬಹುಶಃ ಇದೇ ದೇಶದ ಅತ್ಯಂತ ದೊಡ್ಡ ಹೆಬ್ಬಾವಾಗಿರಬಹುದು” ಎಂದು ಅಂದಾಜಿಸಲಾಗಿದೆ. ರಕ್ಷಣೆಯ ಬಳಿಕ ರಾತ್ರಿಯಾಗಿದ್ದರಿಂದ ಹೆಬ್ಬಾವನ್ನು ಬೆಳಿಗ್ಗೆ ಕುಮಟಾ ಅರಣ್ಯ ಇಲಾಖೆಯ ಒಪ್ಪಿಸಲಾಗಿದೆ. ಮೈಮೇಲೆ ಸಣ್ಣಪುಟ್ಟ ಗಾಯಗಳಿರುವುದರಿಂದ ಮೈಸೂರು ಮೃಗಾಲಯಕ್ಕೆ ಕಳಿಸಲಾಗಿದೆ. ಡಿಎಫ್ಒ ರವಿಶಂಕರ್, ಎಸಿಎಫ್ ಜಿ.ಲೋಹಿತ್, ಆರ್ಪಿಎಫ್ಒ ಎಸ್.ಟಿ.ಪಟಗಾರ್, ಡಿಆರ್ಎಫ್ಒ ಹೂವಣ್ಣ ಗೌಡ ಸ್ಥಳದಲ್ಲಿದ್ದರು.