LATEST NEWS
ಸಿಕ್ಕಿ ಬಿದ್ದ ಭಾರತದ ಅತಿ ದೊಡ್ಡ ಕಾರುಕಳ್ಳ…!!
ದೆಹಲಿ, ಸೆಪ್ಟೆಂಬರ್ 06: ಭಾರತದ ಅತಿ ದೊಡ್ಡ ಕಾರುಕಳ್ಳ ಎಂಬ ಕುಖ್ಯಾತಿ ಹೊಂದಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಅನಿಲ್ ಚೌಹಾಣ್ (52) ಎಂದು ಗುರುತಿಸಲಾಗಿದೆ. ಈತನ ವಿರುದ್ದ ಬರೋಬ್ಬರಿ 180 ಪ್ರಕರಣಗಳು ದಾಖಲಾಗಿವೆ. ಅಸ್ಸಾಂನ ತೇಜ್‌ಪುರ ಮೂಲದ ಖಾನ್‌ಪುರ ಎಕ್ಸ್‌ಟೆನ್ಶನ್‌ನ ನಿವಾಸಿ ಅನಿಲ್ ಚೌಹಾಣ್ 12 ನೇ ತರಗತಿಯವರೆಗೆ ಓದಿದ್ದಾನೆ. 1998 ರಲ್ಲಿ ವಾಹನಗಳನ್ನು ಕದಿಯಲು ಪ್ರಾರಂಭಿಸಿದ ಈತ ಇಲ್ಲಿಯವರೆಗೆ 5000 ಕ್ಕೂ ಹೆಚ್ಚು ವಾಹನಗಳನ್ನು ಕದ್ದಿದ್ದಾನೆ.
ಅನಿಲ್‌ನನ್ನು ಈ ಹಿಂದೆಯೂ ಹಲವು ಬಾರಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಿಜಾಮುದ್ದೀನ್ ಪೊಲೀಸ್ ಠಾಣೆಯ ಕ್ರಿಮಿನಲ್ ಕೇಸ್‌ನಲ್ಲಿ ಐದು ವರ್ಷಗಳ ಕಾಲ ಶಿಕ್ಷೆಗೊಳಗಾಗಿದ್ದ. ಈತನ ಮೇಲೆ 180 ಕ್ರಿಮಿನಲ್ ಕೇಸ್ ದಾಖಲಾಗಿದೆ.
ಅಸ್ಸಾಂ ಸರ್ಕಾರದಲ್ಲಿ ವರ್ಗ-1 ಗುತ್ತಿಗೆದಾರರಾಗಿದ್ದ ಈತನ ಮೇಲೆ ಜಾರಿ ನಿರ್ದೇಶನಾಲಯ ಜಾರಿ ಮಾಡಿತ್ತು. ಈತನ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡ ಬಳಿಕ ಬ್ಯಾಂಕ್ ಹರಾಜು ಹಾಕಿತ್ತು. ಇದಾದ ಬಳಿಕ ಅನಿಲ್ ವಾಹನ ಕಳ್ಳತನಕ್ಕೆ ಇಳಿದಿದ್ದ. ಆರೋಪಿಯು ಈಶಾನ್ಯ ರಾಜ್ಯದಲ್ಲಿ ಘೇಂಡಾಮೃಗದ ಕೊಂಬಿನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾನೆ. ಈತನಿಗೆ ಮೂವರು ಪತ್ನಿಯರು ಮತ್ತು ಏಳು ಮಂದಿ ಮಕ್ಕಳಿದ್ದಾರೆ.