FILM
ಬಾಲಿವುಡ್ ಚಿತ್ರ ನಿರ್ಮಾಪಕನ ಮೇಲೆ ಮತ್ತೊಂದು ಲೈಂಗಿಕ ಕಿರುಕುಳ ಆರೋಪ, ಬಾಲಿವುಡ್ ನಲ್ಲಿ ಡ್ರಗ್ಸ್ ಬಳಿಕ ಇದೀಗ ಸೆಕ್ಸ್ ಜಾಲ

ಮುಂಬೈ, ಸೆಪ್ಟಂಬರ್ 11: ಹಿಂದಿ ಚಿತ್ರ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಮಾಡಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪೌಲಾ ಎನ್ನುವ ಯುವತಿ ಈ ಆರೋಪವನ್ನು ಮಾಡಿದ್ದು, ತನ್ನ ಇನ್ಟ್ರಾಗ್ರಾಂ ಪೇಜ್ ನಲ್ಲಿ ತನ್ನ ಮೇಲಾದ ದೌರ್ಜನ್ಯವನ್ನು ಬರೆದುಕೊಂಡಿದ್ದಾಳೆ.
ಚಿತ್ರವೊಂದಕ್ಕೆ ನಾಯಕಿ ನಟಿಯ ಆಡಿಷನ್ ಗೆ ಸಾಜಿದ್ ಖಾನ್ ಕಛೇರಿಗೆ ತೆರಳಿದ್ದ ಸಂದರ್ಭದಲ್ಲಿ ಸಾಜಿದ್ ಖಾನ್ ಪೌಲಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ನಟಿಯಾಗಬೇಕಾದಲ್ಲಿ ತನ್ನ ಜೊತೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಈ ಘಟನೆ ನಡೆದಾಗ ಪೌಲಾ ಳಿಗೆ 17 ವರ್ಷವಾಗಿದ್ದು, ತನ್ನ ಮೇಲಾದ ಲೈಂಗಿಕ ದೌರ್ಜನ್ಯವನ್ನು ಪೌಲಾ ಕೆಲ ಸಮಯದ ಬಳಿಕ ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.

ತನ್ನ ಮುಂದೆ ಬಟ್ಟೆ ಬಿಚ್ಚಿ ನಿಲ್ಲುವಂತೆಯೂ ಸಾಜಿದ್ ಖಾನ್ ತನಗೆ ಒತ್ತಡ ಹೇರಿದ್ದು, ಆ ಸಂದರ್ಭದಲ್ಲಿ ತನಗೆ ಆತನ ವಿರುದ್ಧ ಮಾತನಾಡಲು ಧೈರ್ಯವಿಲ್ಲದ ಕಾರಣ ಈ ವಿಚಾರವನ್ನು ಇಷ್ಟು ಸಮಯ ಮುಚ್ಚಿಟ್ಟುಕೊಂಡಿದ್ದೆ ಎಂದೂ ಆಕೆ ಬರೆದುಕೊಂಡಿದ್ದಾಳೆ.
ನಟ ಸುಶಾಂತ್ ಸಿಂಗ್ ಅನುಮಾನಾಸ್ಪದ ಸಾವಿನ ಬಳಿಕ ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದ್ದು, ಬಾಲಿವುಡ್ ಒಳಗೆ ನಡೆಯುತ್ತಿರುವ ವಿಚಾರಗಳು ಇದೀಗ ಒಂದೊಂದಾಗಿ ಬೆಳಕಿಗೆ ಬರಲಾರಂಭಿಸಿದೆ. ಒಂದೆಡೆ ಸ್ಪಜನಪಕ್ಷಪಾತ, ಇನ್ನೊಂದೆಡೆ ಡ್ರಗ್ಸ್ ಜಾಲ ಹಾಗೂ ಇದೀಗ ಸೆಕ್ಸ್ ಜಾಲವೂ ಬೆಳಕಿಗೆ ಬರಲಾರಂಭಿಸಿರುವುದು ಬಾಲಿವುಡ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ತೋರಿಸಲಾರಂಭಿಸಿದೆ.
ಸಾಜಿದ್ ಖಾನ್ ವಿರುದ್ಧ ಇದು ನಾಲ್ಕನೇ ಲೈಂಗಿಕ ಕಿರುಕುಳ ಆರೋಪವಾಗಿದ್ದು, ಆತನನ್ನು ಕೂಡಲೇ ಬಂಧಿಸಬೇಕು ಎಂದು ಇದೀಗ ಟ್ವಿಟರ್ ಅಭಿಯಾನ ಆರಂಭಗೊಂಡಿದೆ.