Connect with us

LATEST NEWS

ಕೊರೊನಾ ಹಾಗೂ ಮಳೆ ನಡುವೆ ಸರಳ ರೀತಿಯಲ್ಲಿ ನಡೆದ ಉಡುಪಿ ಕೃಷ್ಣ ಜನ್ಮಾಷ್ಠಮಿ

ಉಡುಪಿ ಸೆಪ್ಟೆಂಬರ್ 11: ಕೊರೊನಾ ಆರ್ಭಟದಿಂದ ಕಳೆಗುಂದಿದ ಉಡುಪಿ ಕೃಷ್ಣ ಜನ್ಮಾಷ್ಠಮಿ ಹಾಗೂ ವಿಟ್ಲಪಿಂಡಿಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯೂ ಕೂಡ ಸಾತ್ ನೀಡಿದ್ದು, ಸರಳವಾಗಿ ನಡೆಯುತ್ತಿದ್ದ ಕೃಷ್ಣ ಜನ್ಮಾಷ್ಠಮಿಗೆ ಮಳೆರಾಯನ ಪ್ರವೇಶ ಈ ಬಾರಿ ವಿಶೇಷವಾಗಿತ್ತು.


ಕೊರೊನಾ ಮತ್ತೆ ವರುಣನ ಅರ್ಭಟದ ಮಧ್ಯೆ ಕೃಷ್ಣ ನಗರಿ ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಾಪನಗೊಂಡಿದೆ. ಅಪರಾಹ್ನ ಶ್ರೀಕೃಷ್ಣನ ಉತ್ಸವ ಆರಂಭವಾಗುತ್ತಿದ್ದಂತೆ ಧಾರಾಕಾರವಾಗಿ ಮಳೆ ಆರಂಭವಾಗಿದೆ. ಮಳೆ ನಡುವೆಯೇ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃತ್ತಿಕಾ ಮೂರ್ತಿಯ ಉತ್ಸವ ನಡೆಸಲಾಯಿತು.


ಕೊರೋನಾ ನಿಯಮದ ಅನುಸಾರ ಕೃಷ್ಣ ಮಠದ ಮತ್ತು ಅಷ್ಟಮಠಗಳ ಸಿಬ್ಬಂದಿಗಳು, ಗೊಲ್ಲ ಸಮುದಾಯದವರು ಕೃಷ್ಣನ ಉತ್ಸವದಲ್ಲಿ ಸಾಂಪ್ರದಾಯಿಕವಾಗಿ ಪಾಲ್ಗೊಳ್ಳುವ ಅವಕಾಶ ಕೊಡಲಾಗಿತ್ತು. ರಥಬೀದಿಯ ಆರು ಗೇಟುಗಳಲ್ಲೂ ಪೊಲೀಸರ ನಿಯೋಜನೆ ಇದ್ದು, ಸಾರ್ವಜನಿಕರಿಗೆ ರಥಬೀದಿ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಈ ಹಿಂದಿನ ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಮೊಸರು ಕುಡಿಕೆ ಉತ್ಸವ ನಡೆದಿದ್ದು ಅಷ್ಟ ಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡಿದ್ದರು.


ಅಪರಾಹ್ನ ಮೂರು ಗಂಟೆಗೆ ದೇವಾಳದ ಪರಿಸರದಲ್ಲಿ ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮ ಆರಂಭವಾಗಿತ್ತು. ಚಿನ್ನದ ರಥದಲ್ಲಿ ಕೃಷ್ಣನ ಮಣ್ಣಿನ ವಿಗ್ರಹದ ಮೆರವಣಿಗೆ,ಮಠದ ಗೋಶಾಲೆಯ ಗೊಲ್ಲರಿಂದ ಮೊಸರು ಕುಡಿಕೆ ಓಡೆಯುವ ಆಟ ಸಾಂಪ್ರಾದಾಯಿವಾಗಿ ನಡೆದರೂ ಕೊರೊನಾದ ಕಾರಣ ಈ ಹಿಂದಿನ ವೈಭವ ಮರೆಯಾಗಿತ್ತು.


ಮಂಗಳ ವಾದ್ಯಗಳ ಜೊತೆ ಕೃಷ್ಣ ದೇವರನ್ನು ಮೆರವಣಿಗೆ ಕೊಂಡೊಯ್ಯಲಾಯಿತಾದರೂ ಸಾರ್ವಜನಿಕರಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಪೋಲಿಸರು ಅವಕಾಶ ನಿರಾಕರಿಸಿದ್ದರು. ಅಷ್ಟಮಿಯ ಪ್ರಮುಖ ಆಕರ್ಷಣೆಯಾದ ವೇಷಗಳು ಈ ಬಾರಿ ಉತ್ಸವದಲ್ಲಿ ಕಂಡು ಬರಲಿಲ್ಲ. ಉತ್ಸವದ ಬಳಿಕ ಮಧ್ವ ಸರೋವರದಲ್ಲಿ ಮೃತ್ತಿಕಾ ವಿಗ್ರಹದ ವಿಸರ್ಜನೆ ನಡೆಸಲಾಯಿತು. ಜನಸಾಗರವೇ ಕಾಣ ಸಿಗುತ್ತಿದ್ದ ಉಡುಪಿ ವಿಟ್ಲಪಿಂಡಿ ಉತ್ಸವ ಈ ಬಾರಿ ಖಾಲಿಯಾದ ರಥಬೀದಿಯಲ್ಲಿ ನಡೆದಿದೆ. ಕೊರೊನಾ ಮನುಷ್ಯನ ಜೀವನದ ಮೇಲೆ ಮಾಡಿರುವ ಆಘಾತ ಉಹಿಸಲು ಆಗದಂತಾಗಿದೆ.

Video:

Facebook Comments

comments