Connect with us

    LATEST NEWS

    ಗಡಿಯಲ್ಲಿ ಚೀನಾ ಪಡೆಗಳ ಜತೆ ಸಂಘರ್ಷ:ಕನಿಷ್ಠ 20 ಭಾರತೀಯ ಯೋಧರು ಹುತಾತ್ಮ

    ಚೀನಾ ಕಡೆಯಲ್ಲಿ 43 ಸಾವು–ನೋವು

    ನವದೆಹಲಿ ಜೂನ್ 16: ಚೀನಾದ ಸೇನಾಪಡೆಗಳೊಂದಿಗೆ ಲಡಾಖ್‌ನ ಪೂರ್ವಭಾಗದ ಗಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ ಕನಿಷ್ಠ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ಮಂಗಳವಾರ ರಾತ್ರಿ ದೃಢಪಡಿಸಿದೆ. ಈ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.


    ಚೀನಾಗೆ ಭಾರತೀಯ ಯೋಧರು ಪ್ರತ್ಯತ್ತರ ನೀಡಿದ್ದು, ದಾಳಿಯಲ್ಲಿ ಚೀನಾದ 43 ಯೋಧರು ಬಲಿಯಾಗಿದ್ದಾರೆ. ಇದರಲ್ಲಿ ಸಾವು ಹಾಗೂ ಗಂಭೀರ ಗಾಯಗೊಡಿರುವ ಪ್ರಕರಣಗಳು ಸೇರಿವೆ ಎಂದು ಎಎನ್‌ಐ ವರದಿ ತಿಳಿಸಿದೆ. ಅಷ್ಟೇ ಅಲ್ಲದೆ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್ಓಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿದೆ.


    ಸೋಮವಾರ ರಾತ್ರಿ ನಡೆದಿದ್ದ ಘರ್ಷಣೆಯಲ್ಲಿ ಭಾರತೀಯ ಸೇನೆಯ ಕರ್ನಲ್ ಸಂತೋಷ್ ಬಾಬು, ಹವಾಲ್ದಾರ್ ಪಳನಿ ಮತ್ತು ಸಿಪಾಯಿ ಓಝಾ ಹುತಾತ್ಮರಾಗಿದ್ದರು ಎಂದು ಈ ಹಿಂದೆ ಹೇಳಲಾಗಿತ್ತು. ಈ ಹಿನ್ನಲೆ ಗಡಿಯಲ್ಲಿನ ಬೆಳವಣಿಗೆಗಳಿಗೆ ಸಂಬಂಧಿಸಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರ ಜತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆ ನಡೆಸಿದ್ದು, ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ.‘ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಘಟನಾ ಸ್ಥಳದಲ್ಲಿ ಎರಡೂ ಕಡೆಯ ಹಿರಿಯ ಸೇನಾಧಿಕಾರಿಗಳ ನಡುವಣ ಮಾತುಕತೆ ಪ್ರಗತಿಯಲ್ಲಿದೆ’ ಎಂದೂ ಮೂಲಗಳು ತಿಳಿಸಿವೆ.

    ಸದ್ಯಕ್ಕೆ, ಎರಡೂ ಕಡೆಯಿಂದ ಕದನ ವಿರಾಮ ನಡೆದಿದ್ದು ಉಭಯ ರಾಷ್ಟ್ರಗಳ ಮಧ್ಯೆ ಸೇನಾಧಿಕಾರಿಗಳ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಭಾರತಕ್ಕೆ ಸೇರಿದ ಲಡಾಖ್ ಪ್ರಾಂತದ ಉತ್ತರ ಭಾಗದಲ್ಲಿ ಚೀನಾ ಸೈನಿಕರು ರಸ್ತೆ ನಿರ್ಮಿಸುತ್ತಿರುವುದು ಭಾರತೀಯ ಸೇನೆಯ ಆಕ್ಷೇಪಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಗಡಿಯಲ್ಲಿ ಸೇನೆ ಜಮಾವಣೆಗೊಂಡು ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಆದರೆ, ನಾಲ್ಕೈದು ದಿನಗಳಲ್ಲಿ ಮಾತುಕತೆ ಪರಿಣಾಮ ಉಭಯ ಕಡೆಗಳಿಂದಲೂ ಸೇನೆ ಹಿಂತೆಗೆಯವ ನಿರ್ಧಾರಕ್ಕೆ ಬರಲಾಗಿತ್ತು.‌ ಆದರೆ, ಇಂಥ ಸಂದರ್ಭದಲ್ಲಿಯೇ ಚೀನಾ ನರಿ ಬುದ್ಧಿ ತೋರಿಸಿದ್ದು ಗ್ಯಾಲ್ವನ್ ಕಣಿವೆ ಭಾಗದಲ್ಲಿ ಸೇರಿದ್ದ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದೆ. ಪ್ರತಿಯಾಗಿ ಭಾರತದ ಯೋಧರು ಕೂಡ ಚೀನಾದ ಸೈನಿಕರ ಮೇಲೆ ದಾಳಿ ಮಾಡಿದ್ದಾರೆ. ಎರಡೂ ಕಡೆಗಳಲ್ಲಿ ಸಾಕಷ್ಟು ಸಾವು ನೋವು ಆಗಿದ್ದು ವಿಶ್ವ ರಾಷ್ಟ್ರಗಳಿಂದ ಖಂಡನೆ ವ್ಯಕ್ತವಾಗಿದೆ.

    ಇನ್ನು 1975ರ ಬಳಿಕ ಇದೇ ಮೊದಲ ಬಾರಿಗೆ ಚೀನಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಯೋಧರು ಹುತಾತ್ಮರಾಗಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಶೇಷ ಅಂದ್ರೆ, ಈ ಹಿಂದೆ 1962ರಲ್ಲಿ ಭಾರತ – ಚೀನಾ ಮಧ್ಯೆ ಯುದ್ಧ ಆಗಿದ್ದೂ ಗಡಿಯಲ್ಲಿ ರಸ್ತೆ ನಿರ್ಮಿಸುವ ವಿಚಾರದಲ್ಲೇ ಆಗಿತ್ತು. ಆರಂಭದಲ್ಲಿ ಘರ್ಷಣೆ ನಡೆದು ಕೊನೆಗೆ ಯುದ್ಧ ಉಂಟಾಗಿತ್ತು

    Share Information
    Advertisement
    Click to comment

    You must be logged in to post a comment Login

    Leave a Reply