LATEST NEWS
ಸಕ್ರಿಯ ರಾಜಕೀಯಕ್ಕೆ ಗುಡ್ ಬೈ ಹೇಳಿದ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್

ಚೆನ್ನೈ ಮಾರ್ಚ್ 4: ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ಇದೀಗ ರಾಜಕೀಯ ಸಂಚಲನ ಮೂಡಿದೆ. ಮಾಜಿ ಮುಖ್ಯಂಮತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅವರು ಸಕ್ರಿಯ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ.
ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ. ಶಶಿಕಲಾ ನಟರಾಜನ್ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳ ಜೈಲು ವಾಸದ ಬಳಿಕ ಇತ್ತೀಚೆಗೆ ಶಶಿಕಲಾ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ಶಶಿಕಲಾ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ರಾಜಕೀಯಕ್ಕೆ ಗುಡ್ ಬೈ ಹೇಳುವುದಾಗಿ ಘೋಷಿಸಿದ್ದಾರೆ.

ನಾನು ಯಾವತ್ತೂ ಯಾವುದೇ ಹುದ್ದೆಗೆ ಆಸಿಸಲಿಲ್ಲ. ತಮಿಳುನಾಡಿನ ಜನರಿಗೆ ನಾನು ಕೃತಜ್ಞಳಾಗಿದ್ದೇನೆ. ರಾಜಕೀಯದಿಂದ ದೂರ ಸರಿಯುತ್ತೇನೆ. ಅಲ್ಲದೆ ಅಮ್ಮನ ಸರ್ಕಾರವನ್ನು ತಮಿಳುನಾಡಿನಲ್ಲಿ ಸ್ಥಾಪಿಸಬೇಕೆಂದು ಪ್ರಾರ್ಥಿಸುವುದಾಗಿ ಅವರು ತಿಳಿಸಿದರು.
ಅಕ್ರಮ ಆಸ್ತಿ ಸಂಪಾದಿಸಿದ ಪ್ರಕರಣದಲ್ಲಿ ಶಶಿಕಲಾ ಅವರಿಗೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಜನವರಿ 27ರಂದು ಜೈಲಿನಿಂದ ಶಶಿಕಲಾ ಬಿಡುಗಡೆಯಾಗಿದ್ದ ಶಶಿಕಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಜನವರಿ 31ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಶಶಿಕಲಾ ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. 2021ರ ಫೆ.8ರಂದು ಶಶಿಕಲಾ ಅವರು ತವರಿಗೆ ತೆರಳಿದ್ದರು.
ಶಶಿಕಲಾ ಅವರ ಆಗಮನದಿಂದ ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಆಡಳಿತರೂಢ ಎಐಎಡಿಎಂಕೆ ಮತ್ತೆ ಅಧಿಕಾರ ಉಳಿಸಿಕೊಳ್ಳಲು ಶಶಿಕಲಾ ಅವರನ್ನು ಬಳಸಿಕೊಳ್ಳುವ ಸಾಧ್ಯತೆ ಇತ್ತು. ಆದರೆ ಇದೀಗ ಅವರ ದಿಢೀರ್ ನಿರ್ಧಾರ ತಮಿಳುನಾಡು ರಾಜಕೀಯದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದೆ.