Connect with us

    KARNATAKA

    ಉರುಳಾಯ್ತೇ ಐಎಂಎ ಹಗರಣ ; ಐಎಎಸ್ ಅಧಿಕಾರಿ ಆತ್ಮಹತ್ಯೆಗೆ ಕಾರಣವೇನು ?

    ಬೆಂಗಳೂರು, ಜೂನ್ 24 : ಹಿರಿಯ ಐಎಎಸ್ ಅಧಿಕಾರಿ ವಿಜಯಶಂಕರ್ ನಿನ್ನೆ ರಾತ್ರಿ ದಿಢೀರ್ ಆಗಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಐಎಂಎ ಜುವೆಲ್ಲರಿ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಣೆಗೆ ಯತ್ನಿಸಿದ್ದೇ ಅಧಿಕಾರಿಯ ಸಾವಿಗೆ ಕಾರಣವಾಯ್ತಾ ಅನ್ನೋ ಸಂಶಯ ವ್ಯಕ್ತವಾಗಿದೆ.

    ಸಕಾಲ ಕೇಂದ್ರದ ನಿರ್ದೇಶಕರಾಗಿದ್ದ ವಿಜಯಶಂಕರ್ ಬೆಂಗಳೂರಿನ ಜಯನಗರ ಡಿ ಬ್ಲಾಕ್ ನಲ್ಲಿರುವ ಅವರ ಮನೆಯ ಬೆಡ್ ರೂಂ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಶಂಕರ್ ಅವರ ಪತ್ನಿ ತನ್ನ ತಂದೆಯ ಮನೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಸಂಜೆ 7 ಗಂಟೆ ವೇಳೆಗೆ ಪತ್ನಿ ಮನೆಗೆ ಮರಳಿದಾಗ ವಿಜಯಶಂಕರ್ ಮನೆಯ ಬಾಗಿಲನ್ನು ತೆಗೆದಿರಲಿಲ್ಲ. ಹೀಗಾಗಿ ಬಾಗಿಲು ಒಡೆದು ನೋಡಿದಾಗ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಪತ್ತೆಯಾಗಿತ್ತು. ವಿಜಯಶಂಕರ್ ನಿವಾಸಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಿಜಯಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ? ಇಲ್ಲಾ ಸಾವಿಗೆ ಬೇರೆ ಯಾವುದಾದ್ರೂ ಕಾರಣ ಇರಬಹುದೇ ಅನ್ನುವ ಕುರಿತು ತನಿಖೆ ನಡೆಸುತ್ತಿದ್ದಾರೆ.

    ಕುತ್ತಿಗೆ ಸುತ್ತಿಕೊಂಡಿತ್ತು ಐಎಂಎ ಪ್ರಕರಣ !

    ಬೆಂಗಳೂರಿನಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಐಎಂಎ ಜುವೆಲ್ಲರಿಯ ವಂಚನೆ ಪ್ರಕರಣದಲ್ಲಿ ಆಗಿನ ಬೆಂಗಳೂರು ಜಿಲ್ಲಾಧಿಕಾರಿ ಆಗಿದ್ದ ವಿಜಯಶಂಕರ್ ಪ್ರಮುಖ ಆರೋಪ ಹೊತ್ತಿದ್ದರು. ಐಎಂಎ ಸಂಸ್ಥೆಯಲ್ಲಿ ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದ ಬಗ್ಗೆ ಹಲವರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪ್ರಕರಣ ಮುಚ್ಚಿ ಹಾಕುವ ನೆಪದಲ್ಲಿ ಭಾರೀ ಕಿಕ್ ಬ್ಯಾಕ್ ಪಡೆದಿದ್ದ ವಿಜಯಶಂಕರ್, ಐಎಂಎ ಸಂಸ್ಥೆಯ ಸಂಸ್ಥಾಪಕ ಮನ್ಸೂರ್ ಖಾನ್ ಬಗ್ಗೆ ಕ್ಲೀನ್ ಚೀಟ್ ಕೊಟ್ಟಿದ್ದರು. ಅದಕ್ಕಾಗಿ ಬಿಲ್ಡರ್ ಒಬ್ಬರಿಂದ 2 ಕೋಟಿ ರೂಪಾಯಿ ಲಂಚ ಪಡೆದಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.

    ಆನಂತರ ವಂಚನೆ ಪ್ರಕರಣ ಹೊರಬೀಳುತ್ತಿದ್ದಂತೆ ಸಾವಿರಾರು ಮಂದಿ ಮನ್ಸೂರ್ ಖಾನ್ ಹಾಗೂ ಐಎಂಎ ಸಂಸ್ಥೆಯ ವಿರುದ್ದ ದೂರು ನೀಡಲು ಬಂದಿದ್ದಲ್ಲದೆ, ಬೆಂಗಳೂರಿನಲ್ಲಿ ಹೈಡ್ರಾಮಾವೇ ನಡೆದಿತ್ತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಸಿಬಿಐ ಜಿಲ್ಲಾಧಿಕಾರಿ ವಿಜಯಶಂಕರ್ ಸೇರಿ 11 ಮಂದಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿತ್ತು. ಅಲ್ಲದೇ ಬೆಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ ವಿಜಯಶಂಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಪೊಲೀಸರ ವಶದಲ್ಲಿದ್ದ ವಿಜಯಶಂಕರ್, ಸುಮಾರು 9 ತಿಂಗಳ ಕಾಲ ಜೈಲು ಸೇರಿದ್ದರು.

    ಇತ್ತೀಚೆಗೆ ಬೇಲ್ ಮೂಲಕ ಹೊರಗಡೆ ಬಂದ ವಿಜಯ ಶಂಕರ್ ಅಮಾನತ್ತು ರದ್ದತಿ ಮಾಡಿಕೊಂಡು ಕೆಲಸಕ್ಕೆ ಹಾಜರಾಗಿದ್ದರು. ಅಲ್ಲದೇ ಇತ್ತೀಚಿಗೆ ಸಕಾಲ ನಿರ್ದೇಶಕರಾಗಿಯೂ ಹುದ್ದೆ ಗಿಟ್ಟಿಸಿಕೊಂಡಿದ್ದರು. ಆದರೆ ಐಎಂಎ ಲಂಚ ಪ್ರಕರಣ ವಿಜಯಶಂಕರ್ ಅವರನ್ನು ತೀವ್ರ ಮುಜುಗರಕ್ಕೆ ಈಡಾಗಿಸಿತ್ತು. ವಿಧಾನಸೌಧ ಸುತ್ತಮುತ್ತ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ತಂದಿತ್ತು.

    ವಿಚಾರಣೆಗೆ ನೋಟಿಸ್ ಕೊಟ್ಟಿದ್ದ ಸಿಬಿಐ

    ಸಕಾಲ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಐಎಂಎ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳು ವಿಜಯಶಂಕರ್ ಗೆ ನೋಟಿಸ್ ನೀಡಿದ್ದರು. 5 ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆಯೂ ಸೂಚನೆ ನೀಡಿದ್ದರು. ಅಲ್ಲದೇ ವಿಜಯಶಂಕರ್ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯ ಸರಕಾರದಿಂದಲೂ ಅನುಮತಿ ಕೋರಿದ್ದರು. ಆದರೆ ಅದಕ್ಕೆ ಅವಕಾಶ ನೀಡದಂತೆ ವಿಜಯಶಂಕರ್ ಹಿರಿಯ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಐಎಂಎ ಪ್ರಕರಣವನ್ನು ಶೀಘ್ರದಲ್ಲಿಯೇ ಮುಕ್ತಾಯಗೊಳಿಸುವಂತೆ ತಿಳಿಸಿದ್ದು ವಿಜಯಶಂಕರ್ ಪಾಲಿಗೆ ಮುಳುವಾಗಿತ್ತು. ಇದರಿಂದ ಖಿನ್ನರಾಗಿದ್ದ ಅಧಿಕಾರಿ, ಪದೇ ಪದೇ ವಿಧಾನಸೌಧಕ್ಕೆ ಬಂದು ಹೋಗುತ್ತಿದ್ದರು. ಮತ್ತೆ ಸಿಬಿಐ ಅಧಿಕಾರಿಗಳು ಬಂಧಿಸುತ್ತಾರೆಂಬ ಭೀತಿಯಿಂದ ವಿಜಯಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ತಿಂದುಂಡು ಮಲಗುವಷ್ಟು ಆಸ್ತಿ ಇದ್ದರೂ, ಲಂಚ ತಿಂದು ತೇಗಲು ಹೋಗಿದ್ದು ಈಗ ಐಎಎಸ್ ಅಧಿಕಾರಿಯ ಜೀವಕ್ಕೇ ಮುಳುವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ

    Share Information
    Advertisement
    Click to comment

    You must be logged in to post a comment Login

    Leave a Reply