Connect with us

KARNATAKA

ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್‍ ಸಾಧ್ಯತೆ – ಶ್ರೀರಾಮುಲು

ಬೆಂಗಳೂರು: ಎರಡು ತಿಂಗಳು ಲಾಕ್ ಡೌನ್ ನಂತರವೂ ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಲ್ಲಿರುವ ಈಗ ಸರಕಾರಗಳಿಗೆ ತಲೆನೋವು ತಂದಿದೆ. ದೇಶದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕದಲ್ಲಿ ಈಗ ದಿನದಿಂದ ದಿನಕ್ಕೆ ಕೊರೊನಾ ಸ್ಪೋಟಗೊಳ್ಳುತ್ತಿದ್ದು, ಸೊಂಕಿತರ ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆ ಹಾದಿಯಲ್ಲಿದೆ. ಇದು ರಾಜ್ಯ ಸರಕಾರವನ್ನು ಸಂಕಷ್ಟಕ್ಕೆ ದೂಡಿದ್ದು, ಹೀಗಾಗಿ ಮತ್ತೆ ಲಾಕ್‍ಡೌನ್ ಕುರಿತು ಚರ್ಚೆ ಆರಂಭವಾಗಿದೆ. ಈ ಕುರಿತು ಇದೀಗ ಸ್ವತಃ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟನೆ ನೀಡಿದ್ದಾರೆ.


ಮತ್ತೆ ಲಾಕ್ ಡೌನ್ ಕುರಿತಂತೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು ಮತ್ತೆ ಲಾಕ್‍ಡೌನ್ ಘೋಷಿಸುವ ಕುರಿತು ಸುಳಿವು ನೀಡಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮತ್ತೊಮ್ಮೆ ಲಾಕ್‍ಡೌನ್ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಲಾಕ್‍ಡೌನ್ ಘೋಷಿಸುವ ಕುರಿತು ಸುಳಿವು ನೀಡಿದ್ದಾರೆ.

ಮತ್ತೊಮ್ಮೆ ಲಾಕ್‍ಡೌನ್ ಮಾಡುವ ಕುರಿತು ಟಾಸ್ಕ್‍ಫೋರ್ಸ್ ಸಭೆ, ತಜ್ಞರು ಹಾಗೂ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಕೊರೊನಾ ಸೋಂಕು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಸ್ಯಾನಿಟೈಸರ್ ಬಳಕೆ ಹಾಗೂ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಮುದಾಯ ಭವನಗಳು, ಶಾಲೆ, ಮದುವೆ ಹಾಲ್‍ಗಳು, ಪ್ರದರ್ಶನ ಕೇಂದ್ರಗಳು, ಹೋಟೆಲ್ ಹಾಗೂ ಸ್ಟೇಡಿಯಂಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದ್ದಾರೆ. ಕೋವಿಡ್ ಕೇರ್ ಸೆಂಟರ್‍ನಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ಇರಲಿದ್ದು, ಎಲ್ಲ ದಿನಗಳಲ್ಲಿಯೂ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿವೆ. 50 ವರ್ಷಕ್ಕಿಂತ ಕೆಳಗಿನ, ಸೋಂಕಿನ ಲಕ್ಷಣಗಳಿಲ್ಲದವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Facebook Comments

comments