Connect with us

    LATEST NEWS

    ಸ್ಯಾಂಡ್ ಬಝಾರ್ ಎನ್ನುವ ಅಧಿಕೃತ ಮರಳು ಯಾರ್ಡ್ ಒಳಗೆ ಅನಧಿಕೃತ ಮರಳು ಸಾಗಾಟ !

    ಸ್ಯಾಂಡ್ ಬಝಾರ್ ಎನ್ನುವ ಅಧಿಕೃತ ಮರಳು ಯಾರ್ಡ್ ಒಳಗೆ ಅನಧಿಕೃತ ಮರಳು ಸಾಗಾಟ !

    ಮಂಗಳೂರು ನವಂಬರ್ 26: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಿತಿ ಮೀರಿದ್ದ ಮರಳು ಮಾಫಿಯಾವನ್ನು ತಡೆಯಲು ಜಿಲ್ಲಾಡಳಿತ ಸ್ಯಾಂಡ್ ಬಝಾರ್ ಎನ್ನುವ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತಂದಿತ್ತು. ಈ ಸ್ಯಾಂಡ್ ಬಝಾರ್ ನ ಆ್ಯಪ್ ಮೂಲಕ ಸಾರ್ವಜನಿಕರು ತಮಗೆ ಬೇಕಾದ ಮರಳನ್ನು ಆನ್ ಲೈನ್ ಮೂಲಕ ಬುಕ್ ಮಾಡಿ ಅತೀ ಕಡಿಮೆ ಬೆಲೆಗೆ ಪಡೆಯುವ ಅವಕಾಶವನ್ನೂ ನೀಡಲಾಗಿತ್ತು. ಆದರೆ ಇದೀಗ ಈ ಸ್ಯಾಂಡ್ ಬಝಾರ್ ಒಳಗೂ ಮರಳು ಮಾಫಿಯಾ ಎಂಟ್ರಿ ಕೊಟ್ಟಿದೆ. ಸ್ಯಾಂಡ್ ಬಝಾರ್ ಮೂಲಕ ಸರಕಾರಕ್ಕೆ ಸಲ್ಲಬೇಕಾದ ರಾಯಲ್ಟಿ ಇದೀಗ ಈ ಮರಳು ಮಾಫಿಯಾದ ಕೈ ಸೇರುತ್ತಿದೆ.

    ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಈ ಸ್ಯಾಂಡ್ ಬಜಾರ್ ಇದ್ದು, ತುಂಬೆ ಡ್ಯಾಂ ನ ಪಕ್ಕದಲ್ಲಿ ನೀರಿನಿಂದ ಮರಳು ತೆಗೆಯುವ ಕಾಮಗಾರಿಗೆ ಮಂಗಳೂರು ಮಹಾನಗರ ಪಾಲಿಕೆ ಟೆಂಡರ್ ಕರೆದಿತ್ತು. ಈ ಸಂಬಂಧ 26.05.19 ರಿಂದ ಆಲ್ಫತ್ (Alfath) ಟ್ರೇಡಿಂಗ್ ಆ್ಯಂಡ್ ಕಾಂಟ್ರ್ಯಾಕ್ಟರ್ಸ್ ಎನ್ನುವ ಕಂಪನಿಗೆ ಈ ಟೆಂಟರ್ ನೀಡಲಾಗಿತ್ತು.

    ಈ ರೀತಿ ಡ್ರಜ್ಜಿಂಗ್ ಮೂಲಕ ತೆಗೆದ ಮರಳನ್ನು ಜಿಲ್ಲಾಡಳಿತ ಸ್ಯಾಂಡ್ ಬಜಾರ್ ಮೂಲಕ ಸಾರ್ವಜನಿಕರಿಗೆ ಅತೀ ಕಡಿಮೆ ಬೆಲೆಯಲ್ಲಿ ವಿತರಿಸುವ ವ್ಯವಸ್ಥೆಯನ್ನೂ ಮಾಡಿತ್ತು. ಆನ್ ಲೈನ್ ಮೂಲಕ ಮರಳನ್ನು ಬುಕ್ ಮಾಡಿ ಪಡೆಯಬಹುದಾದ ವ್ಯವಸ್ಥೆ ಈ ಆ್ಯಪ್ ನಲ್ಲಿತ್ತು. ಮೊದ ಮೊದಲು 200 ರಿಂದ 300 ರಷ್ಟು ಲಾರಿಗಳು ಸಾಲು ಸಾಲಾಗಿ ನಿಂತು ಇಲ್ಲಿಂದ ಅಗತ್ಯವಿದ್ದವರಿಗೆ ಮರಳು ಸಾಗಾಟ ಮಾಡುತ್ತಿತ್ತು. ಆದರೆ ಯಾವಾಗ ಸರಕಾರ ನಾನ್ ಸಿಆರ್.ಝಡ್ ವ್ಯಾಪ್ತಿಯಿಂದ ಮರಳು ಸಾಗಾಟ ಮಾಡಲು ಖಾಸಗಿ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಟ್ಟಿತೋ ಅಲ್ಲಿಂದ ಈ ಸ್ಯಾಂಡ್ ಬಝಾರ್ ಸಂಪೂರ್ಣ ವೈಫಲ್ಯ ಕಂಡಿದೆ. 200 ಲೋಡ್ ಬದಲು ಇಲ್ಲಿ ದಿನಕ್ಕೆ 10 ಲೋಡ್ ಮರಳು ಹೋಗುವುದೇ ಪ್ರಯಾಸವಾಗಿದೆ.

    ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಯಂತ್ರ ಮೂಲಕ ಮರಳು ತೆಗೆಯುತ್ತಿರುವ ಖಾಸಗಿ ಕಂಪನಿಯು ನದಿಯಿಂದ ತೆಗೆದ ಮರಳನ್ನು ತನ್ನದೇ ಪ್ರತ್ಯೇಕ ರಸ್ತೆಯ ಮಾಡುವ ಮೂಲಕ ಲಾರಿಗಳಿಗೆ ತುಂಬಿಸಿ ಸಾಗಿಸುತ್ತಿದೆ. ಹೊರಗಡೆ ಸರಕಾರದ ಸ್ಯಾಂಡ್ ಮಾಫಿಯಾದ ಯಾರ್ಡ್ ಇದ್ದರೆ, ನಿರ್ಬಂಧಿತ ಪ್ರದೇಶ ಎನ್ನುವ ಬೋರ್ಡ್ ಹಾಕಿ ಒಳಗಡೆಯಿಂದಿ ಅಕ್ರಮವಾಗಿ ಮರಳನ್ನು ಸಾಗಿಸಲಾಗುತ್ತಿದೆ.

    ನಿರ್ಬಂಧಿತ ಪ್ರದೇಶದೊಳಗೆ ನಾಯಿಯನ್ನೂ ಒಳ ಬಿಡದ ಸ್ಯಾಂಡ್ ಬಝಾರ್ ನಲ್ಲಿರುವ ಕೆಲವು ಅನಧಿಕೃತ ವ್ಯಕ್ತಿಗಳು ಮರಳು ಸಾಗಾಟದ ಲಾರಿಗಳನ್ನು ನದಿ ಪಾತ್ರದವರೆಗೆ ಬಿಟ್ಟು ಮರಳನ್ನು ಸಾಗಿಸುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಗಳ ಮಾಹಿತಿಯಂತೆ ಆನ್ ಲೈನ್ ಮೂಲಕ ಮರಳು ಬುಕ್ ಮಾಡಿದ ಲಾರಿಗೆ ಬೆಳಿಗ್ಗೆ 9 ಗಂಟೆಯ ನಂತರ ಮರಳು ಲೋಡ್ ಮಾಡಲಾಗುತ್ತದೆ. ಆದರೆ ಇಲ್ಲಿ ಮಾತ್ರ ಯಾವುದೇ ಟೈಮಿಂಗ್ ಇಲ್ಲದೆ ಮರಳು ಸಾಗಾಟ ನಿರಂತರವಾಗಿ ನಡೆಯುತ್ತಿದೆ.

    ಸ್ಯಾಂಡ್ ಬಝಾರ್ ಒಳಗೆ ಯಾವುದೇ ಅಕ್ರಮವಾಗದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಯನ್ನು ನೇಮಿಸಲಾಗಿದೆ ಎನ್ನುವ ಅಧಿಕಾರಿಗಳು ಈ ಸಿಬ್ಬಂದಿ ಬೆಳಿಗ್ಗೆ 9 ಗಂಟೆಯ ನಂತರವೇ ಯಾರ್ಡ್ ನಲ್ಲಿರುತ್ತಾರೆ. ಆ ವರೆಗೆ ಅಲ್ಲಿರುವ ಅನಧಿಕೃತ ವ್ಯಕ್ತಿಗಳೇ ಒಂದು ಅಧಿಕೃತ ಪರ್ಮಿಟ್ ನ ಹತ್ತಾರು ಜೆರಾಕ್ಸ್ ಕಾಪಿ ತೆಗೆದು ಅದಕ್ಕೆ ಯಾರ್ಡ್ ನಲ್ಲೇ ಇರುವ ಇಲಾಖೆಯ ಸೀಲ್ ಹಾಕುವ ಮೂಲಕ ಒಂದು ಅಧಿಕೃತ ಮರಳು ಲೋಡ್ ಜೊತೆಗೆ ಹತ್ತಾರು ಲೋಡ್ ಗಳನ್ನು ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದಾರೆ.

    ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಇದ್ದರೂ ಇಲಾಖೆ ಮಾತ್ರ ತಾವೇ ಸಾಜಾಗಳಂತೆ ವರ್ತಿಸುತ್ತಿದ್ದು, ಜಿಲ್ಲಾಧಿಕಾರಿಗಳು ಯಾವುದೇ ಸೂಚನೆ ನೀಡದೆ ತುಂಬೆಯಲ್ಲಿರುವ ಸ್ಯಾಂಡ್ ಬಝಾರ್ ಯಾರ್ಡ್ ಗೆ ಭೇಟಿ ನೀಡಿದಲ್ಲಿ ಅಲ್ಲಿ ಆಗುತ್ತಿರುವ ಅಕ್ರಮ ಬೆಳಕಿಗೆ ಬರಲಿದೆ. ಇಲಾಖಾ ಅಧಿಕಾರಿಗಳೇ ನೀಡಿದ ಮಾಹಿತಿ ಪ್ರಕಾರ ಕಳೆದ ಒಂದು ವಾರದಿಂದ ಈ ಯಾರ್ಡ್ ನಲ್ಲಿ ಸಾಗಾಟವಾದ ಮರಳು ಲೋಡ್ ನ ಸಂಖ್ಯೆ ಕೇವಲ 91 ಆಗಿದೆ. ಅದೇ ಪ್ರಕಾರ ಮರಳು ದಿಬ್ಬಗಳನ್ನು ಲೀಸ್ ಗೆ ಪಡೆದ ವ್ಯಕ್ತಿಗಳು ಅಧಿಕೃತವಾಗಿ ಮರಳು ಸಾಗಾಟ ಮಾಡಿದ ಸಂಖ್ಯೆ 1793 ಲೋಡ್ ಗಳು. ಈ ಸಂಖ್ಯೆಗೂ ರಸ್ತೆಯಲ್ಲಿ ಸಂಚರಿಸುವ ಮರಳು ಸಾಗಾಟದ ಲಾರಿಗಳಿಗೂ ಅಜಗಜಾಂತರ ವ್ಯತ್ಯಾಸವಿರುವುದು ಮಾತ್ರ ನಿಜವೇ ಆಗಿದ್ದು, ಆದರೆ ಅಧಿಕೃತ ಲೆಕ್ಕಾಚಾರವನ್ನು ಮಾತ್ರ ನಂಬಬೇಕಾದ ಪರಿಸ್ಥಿತಿಯೂ ಇಲ್ಲಿದೆ.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ತುಂಬೆ ಡ್ಯಾಂ ನಿಂದ ಮಂಗಳೂರು ವರೆಗೆ ನೇತ್ರಾವತಿ ನದಿಯಲ್ಲಿ ಕೇವಲ 3 ಕಡೆಗಳಲ್ಲಿ ಮಾತ್ರ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ. ಆದರೆ 3 ರ ಬದಲು ನೂರು ಕಡೆಗಳಲ್ಲಿ ಅವ್ಯಾಹತವಾಗಿ ರಾತ್ರಿ-ಹಗಲೆನ್ನದೆ ಮರಳು ಹೊರ ರಾಜ್ಯಗಳಿಗೆ ಸಾಗಾಟವಾಗುತ್ತಿರುವುದು ಮಾತ್ರ ಈ ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ಮಾತ್ರ ವಿಪರ್ಯಾಸವೇ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply