ಯೋಧರ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದಾರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತೆ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ ಫೆಬ್ರವರಿ 15: ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೆಲೆ ಆತ್ಮಾಹುತಿ ದಾಳಿಯನ್ನು ಪ್ರಧಾನಿ ನರೇಂದ್ರ ಮೋದೀ ತೀವ್ರವಾಗಿ ಖಂಡಿಸಿದ್ದಾರೆ. ಭದ್ರತಾ ಪಡೆಯ ಯೋಧರ ಮೇಲೆ ದಾಳಿ ಮಾಡಿ ನೆರೆಯ ದೇಶ ದೊಡ್ಡ ತಪ್ಪು ಮಾಡಿದ್ದು, ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ನೆರೆಯ ದೇಶ ಭಾವಿಸಿದರೆ ಅದನ್ನು ಮರೆತುಬಿಡಲಿ ಅದು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದರು.

ಉಗ್ರರ ದಾಳಿಯಿಂದ ವೀರಯೋಧರು ಹುತಾತ್ಮರಾಗಿದ್ದು ನೋಡಿ ನಿಮ್ಮ ರಕ್ತ ಕುದಿಯುತ್ತಿರುತ್ತದೆ ಎಂದು ನನಗೆ ಗೊತ್ತಿದೆ. ಇದೊಂದು ಭಾವನಾತ್ಮಕ ಮತ್ತು ಸೂಕ್ಷ್ಮ ಸಮಯ. ಆಡಳಿತದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ ಈ ಸಂದರ್ಭದಲ್ಲಿ ನಾವು ರಾಜಕೀಯದಿಂದ ದೂರವುಳಿಯಬೇಕು. ದೇಶದ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.

ದಾಳಿಯಲ್ಲಿ ಹುತಾತ್ಮರಾದವರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ. ನಮ್ಮ ಭದ್ರತಾ ಪಡೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರ ಧೈರ್ಯ, ಸಾಹಸಗಳ ಮೇಲೆ ನಮಗೆ ನಂಬಿಕೆಯಿದೆ. ಜಗತ್ತಿನಿಂದ ಸಂಪೂರ್ಣವಾಗಿ ದೂರ ಉಳಿದಿರುವ ನಮ್ಮ ನೆರೆಯ ದೇಶ ತನ್ನ ತಂತ್ರ ಮತ್ತು ಪಿತೂರಿಯಿಂದ ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ಭಾವಿಸಿದರೆ ಅದು ಖಂಡಿತಾ ಸಾಧ್ಯವಿಲ್ಲ ಎಂದು ಸಹ ಪ್ರಧಾನಿ ಸಂದೇಶ ರವಾನಿಸಿದರು.

ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಈ ಸಂದರ್ಭದಲ್ಲಿ ಭಾರತಕ್ಕೆ ಬೆಂಬಲ ಸೂಚಿಸಿದ ಎಲ್ಲಾ ದೇಶಗಳಿಗೆ ಪ್ರಧಾನಿ ಧನ್ಯವಾದ ಹೇಳಿದರು. ಭಯೋತ್ಪಾದನೆಯನ್ನು ಹತ್ತಿಕ್ಕಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಎಂದು ಕರೆ ನೀಡಿದರು.