DAKSHINA KANNADA
ಕರ್ತವ್ಯಕ್ಕಾಗಿ ಜಿಲ್ಲೆಗೆ ಬಂದ ಪೋಲೀಸರಿಗೆ ಊಟ ಪೂರೈಸದ ಜಿಲ್ಲಾಡಳಿತ.
ಮಂಗಳೂರು,ಸೆಪ್ಟಂಬರ್ 7: ಬಿಜೆಪಿ ಯುವಮೋರ್ಚಾ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ರಾಲಿಗೆ ಬಂದೋಬಸ್ತ್ ಗಾಗಿ ಆಗಮಿಸಿದ್ದ ಹೊರ ಜಿಲ್ಲೆಯ ಪೋಲೀಸರಿಗೆ ಊಟ ವಿತರಿಸಲು ಜಿಲ್ಲಾಡಳಿತ ಮರೆತ ವಿಚಾರ ಬೆಳಕಿಗೆ ಬಂದಿದೆ. ಯುವಮೋರ್ಚಾ ಪಿಎಫ್ಐ ಸಂಘಟನೆ ನಿಶೇಧಿಸಬೇಕು ಹಾಗೂ ಸಚಿವ ಬಿ.ರಮಾನಾಥ ರೈ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮಂಗಳೂರು ಚಲೋ ಬೈಕ್ ರಾಲಿಯನ್ನು ಹಮ್ಮಿಕೊಂಡಿತ್ತು.ಈ ರಾಲಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿದೆಡೆಗಳಿಂದ ಬಿಜೆಪಿ ಕಾರ್ಯಕರ್ತರು ಬಂದಂತೆಯೇ , ಕಾರ್ಯಕ್ರಮವನ್ನು ತಡೆಯುವ ಉದ್ಧೇಶದಿಂದ ವಿವಿಧ ಜಿಲ್ಲೆಗಳಿಂದ ಪೋಲೀಸರೂ ಮಂಗಳೂರಿಗೆ ಆಗಮಿಸಿದ್ದರು. ಯುವಮೋರ್ಚಾ ತನ್ನ ಪ್ರತಿಭಟನಾ ಸಭೆಯನ್ನು ಮಂಗಳೂರಿನ ಜ್ಯೋತಿ ವೃತ್ತದಲ್ಲಿ ನಡೆಸಿದರೆ, ಬಳಿತ ಬೈಕ್ ರಾಲಿಯ ಮೂಲಕ ಜಿಲ್ಲಾಧಿಕಾರಿಯ ಕಛೇರಿಗೆ ಮುತ್ತಿಗೆ ಹಾಕುವ ಮೂಲಕ ಕಾರ್ಯಕ್ರಮವು ಮುಕ್ತಾಯವಾಗಿತ್ತು. ಈ ನಡುವೆ ಜಿಲ್ಲೆಯಲ್ಲಿ ಬಂದೋಬಸ್ತ್ ಏರ್ಪಡಿಸಲು ಬಂದಿದ್ದ ಹೊರ ಜಿಲ್ಲೆಗಳ ಪೋಲೀಸರಿಗೆ ಕರ್ತವ್ಯ ಮುಗಿದ ಬಳಿಕ ನೆಹರೂ ಮೈದಾನದಲ್ಲಿ ಸೇರುವಂತೆ ಹಿರಿಯ ಪೋಲೀಸ್ ಅಧಿಕಾರಿಗಳ ನಿರ್ದೇಶನವೂ ಇತ್ತು. ಆದೇ ಪ್ರಕಾರ ನೆಹರೂ ಮೈದಾನದಲ್ಲಿ ಸೇರಿದ್ದ ಪೋಲೀಸರಿಗೆ ಜಿಲ್ಲಾಡಳಿತ 2.30 ಗಂಟೆ ಕಳೆದರೂ ಊಟದ ವ್ಯವಸ್ಥೆಯನ್ನು ಮಾಡಿಲ್ಲ. ಊಟಕ್ಕಾಗಿ ಸುಸ್ತಾಗಿದ್ದ ಪೋಲೀಸರು ಬಿಜೆಪಿ ಪಕ್ಷ ತನ್ನ ಕಾರ್ಯಕರ್ತರಿಗಾಗಿ ವ್ಯವಸ್ಥೆ ಮಾಡಿದ್ದ ಊಟದ ಪೊಟ್ಟಣವನ್ನು ಪಡೆಯುವ ಮೂಲಕ ತನ್ನ ಹಸಿವನ್ನು ನೀಗಿಸಿಕೊಂಡರು.
ಊಟದ ಪೊಟ್ಟಣ ಜಿಲ್ಲಾಡಳಿತದಿಂದಲೇ ಪೂರೈಸಲಾಗಿದೆ ಎಂದು ತಿಳಿದ ಪೋಲೀಸರಿಗೆ ಊಟ ತಿಂದು ಮುಗಿಸಿದಾಗಲೇ ತಿಳಿದಿದ್ದು, ಅದು ಬಿಜೆಪಿ ಪಕ್ಷ ತನ್ನ ಕಾರ್ಯಕರ್ತರಿಗಾಗಿ ವ್ಯವಸ್ಥೆ ಮಾಡಿದ್ದ ಊಟದ ಪೊಟ್ಟಣವೆಂದು. ಹಸಿವಿಗೆ ಯಾವ ಪಕ್ಷವೂ ಇಲ್ಲ, ಯಾವ ಜಾತಿಯೂ ಇಲ್ಲ ಬಿಡಿ. ಆದರೆ ಇಲ್ಲಿರುವ ಪ್ರಶ್ನೆ ದೂರದೂರುಗಳಿಂದ ಭದ್ರತೆಗಾಗಿ ಕರೆಸಿಕೊಂಡ ಪೋಲೀಸರಿಗೆ ಸರಿಯಾದ ಸಮಯದಲ್ಲಿ ಊಟ ವಿತರಿಸಲು ಸಾಧ್ಯವಾಗದೇ ಇದ್ದಲ್ಲಿ ಅವರನ್ನು ಜಿಲ್ಲೆಗೆ ಕರೆಸಿಕೊಳ್ಳುವ ಅಗತ್ಯವಾದರೂ ಏನಿತ್ತು ಎನ್ನುವುದು. ಹೊಟ್ಟೆಗೆ ಸರಿಯಾದ ಊಟ-ತಿಂಡಿ ಕೊಡದೆ ಡ್ಯೂಟಿ ಮಾಡು ಎಂದರೆ, ಆ ಪೋಲೀಸ್ ಸಿಬ್ಬಂದಿಯಿಂದ ಎಷ್ಟರ ಮಟ್ಟಿನ ಸೇವೆ ನಿರೀಕ್ಷಿಸಬಹುದು ಎನ್ನುವುದನ್ನು ಜಾಗೃತ ಸಮಾಜ ಯೋಚಿಸಬೇಕಿದೆ.