DAKSHINA KANNADA
ದೇವಸ್ಥಾನ ಧ್ವಂಸ ಪ್ರಕರಣ- ಮುಖ್ಯಮಂತ್ರಿ ಕ್ಷಮೆಯಾಚನೆಗೆ ಹಿಂದೂ ಸಂಘಟನೆಗಳ ಒತ್ತಾಯ
ಪುತ್ತೂರು ಸೆಪ್ಟೆಂಬರ್ 16: ಮೈಸೂರಿನಲ್ಲಿ ದೇವಸ್ಥಾನವನ್ನು ಧ್ವಂಸಗೊಳಿಸಿರುವುದನ್ನು ವಿರೋಧಿಸಿ ಪುತ್ತೂರಿನಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಪ್ರತಿಭಟನೆ ನಡೆಸಿದರು. ಪುತ್ತೂರಿನ ಮಿನಿ ವಿಧಾನ ಸೌಧದ ಮುಂದೆ ಸೇರಿದ ಸಂಘಟನೆ ಕಾರ್ಯಕರ್ತರು ಬಿಜೆಪಿ ಸರಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಮುಖಂಡ ಶ್ರೀಕೃಷ್ಣ ಉಪಾಧ್ಯಾಯ ಹಿಂದೂ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರದಿಂದ ಈ ಕೃತ್ಯ ನಡೆಯಬಾರದಿತ್ತು, ಈ ಘಟನೆಗೆ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ ಅವರು ,
ಸರಕಾರದ ಗಮನಕ್ಕೆ ಬರದೆ ದೇವಸ್ಥಾನ ಕೆಡವಲಾಗಿದೆ ಎನ್ನುವ ಸಮಜಾಯಿಷಿ ಒಪ್ಪಲು ಸಾಧ್ಯವಿಲ್ಲ, ಸರಕಾರ ಈ ಕೃತ್ಯದ ಬಗ್ಗೆ ಕ್ಷಮೆಯಾಚಿಸದೆ ಇದ್ದಲ್ಲಿ ಚುನಾವಣೆಯಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ. ಈ ಕೃತ್ಯವನ್ನು ಕಾಂಗ್ರೇಸ್ ಅಥವಾ ಬೇರೆ ಯಾವುದೇ ಪಕ್ಷ ಮಾಡಿದ್ದರೆ ಒಪ್ಪಬಹುದಿತ್ತು. ಆದರೆ ಬಿಜೆಪಿಯ ಈ ನಡೆಗೆ ಕ್ಷಮೆಯಿಲ್ಲ ಎಂದರು.