KARNATAKA
ಪಟಾಕಿ ಬ್ಯಾನ್ ವಿರುದ್ದ ಹಿಂದೂಪರ ಸಂಘಟನೆಗಳ ಆಕ್ರೋಶ

ಬೆಳಗಾವಿ ನವೆಂಬರ್ 6: ಕೊರೊನಾ ಸೊಂಕು ಹೆಚ್ಚಾಗದಂತೆ ನಿಯಂತ್ರಣಕ್ಕೆ ತರಲು ಪಟಾಕಿ ನಿಷೇಧ ಮಾಡಿ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ. ಆದರೆ ಸಿಎಂ ಬಿಎಸ್ ವೈ ಆದೇಶ ವಿರುದ್ದ ಈಗ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ಕುರಿತಂತೆ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ನಿಷೇಧ ಮಾಡುವುದು ತಪ್ಪು ಎಂದು ಹೇಳಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಟಾಕಿ ಹೊಡೆಯುವುದರಿಂದಲೇ ಪರಿಸರ ಮಾಲಿನ್ಯ ಆಗುತ್ತದೆ ಎನ್ನುವುದು ಸುಳ್ಳು. ದೀಪಾವಳಿ ಹಬ್ಬದ ವೇಳೆ ಧಾರ್ಮಿಕ ವಿಧಿ-ವಿಧಾನದಿಂದ ಅಚರಣೆ ನಡೆಯವುದರಿಂದ ಪಟಾಕಿಯನ್ನು ನಿಷೇಧ ಮಾಡಬಾರದು. ವಾಹನಗಳಿಂದ ಪರಿಸರ ಎಷ್ಟು ಮಾಲಿನ್ಯ ಆಗುತ್ತದೆ?. ಇದನ್ನು ನಿಯಂತ್ರಿಸಲು ಏಕೆ ಯಾರೂ ಕೂಡಾ ಪ್ರಯತ್ನ ಮಾಡುತ್ತಿಲ್ಲ. ಈಗ ಕಾನೂನು ಜಾರಿ ಮಾಡಲು ಸಿದ್ದವಾಗಿರುವವರು ಅರಣ್ಯ ಪ್ರದೇಶಗಳಿಗೆ ಒಮ್ಮೆ ಭೇಟಿ ನೀಡುವುದು ಒಳಿತು. ಏಕೆಂದರೆ, ಅಭಿವೃದ್ದಿಯ ಹೆಸರಿನಲ್ಲಿ ಎಷ್ಟು ಪರಿಸರವನ್ನು ನೀವು ನಾಶ ಮಾಡಿದ್ದೀರಿ ಎನ್ನುವುದು ತಿಳಿಯುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
