LATEST NEWS
ಹಿಜಬ್ ವಿವಾದ – ಶೀಘ್ರದಲ್ಲೇ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ

ನವದೆಹಲಿ ಜನವರಿ 23:ರಾಜ್ಯ ಸರಕಾರದ ತರಗತಿಗಳಲ್ಲಿ ಹಿಜಬ್ ಧರಿಸುವುದನ್ನು ನಿರ್ಬಂಧಿಸಿ ಕೋರ್ಟ್ ಮೆಟ್ಟಿಲೇರಿರುವ ವಿಧ್ಯಾರ್ಥಿಗಳ ಪ್ರಕರಣವನ್ನು ಇತ್ಯರ್ಥಗೊಳಿಸಲು ಶೀಘ್ರದಲ್ಲಿ ತ್ರಿಸದಸ್ಯ ಪೀಠದಲ್ಲಿ ಆರಂಭಿಸಲಾಗುವುದು. ಅದಕ್ಕೆ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಭರವಸೆ ನೀಡಿದ್ದಾರೆ.
ಮುಂದಿನ ತಿಂಗಳಿನಿಂದ ಪರೀಕ್ಷೆಗಳು ಪ್ರಾರಂಭವಾಗುವ ಹಿನ್ನಲೆ ಹಿಜಬ್ ವಿವಾದದ ಪ್ರಕರಣದ ವಿಚಾರಣೆಯನ್ನು ಶೀಘ್ರ ಆರಂಭಿಸುವಂತೆ ವಿದ್ಯಾರ್ಥಿನಿಯರ ಪರ ವಕೀಲೆ ಮೀನಾಕ್ಷಿ ಅರೋರಾ ಮನವಿ ಮಾಡಿದ ಹಿನ್ನೆಲೆ ಸಿಜೆಐ ಈ ಭರವಸೆ ನೀಡಿದ್ದಾರೆ. ಇಂದು ಕಲಾಪ ಆರಂಭವಾಗುತ್ತಿದ್ದಂತೆ ಈ ಬಗ್ಗೆ ಕೋರ್ಟ್ ಗಮನಕ್ಕೆ ತರಲಾಯಿತು.

ಮುಂದಿನ ತಿಂಗಳು ಪ್ರಾಯೋಗಿಕ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದ್ದು, ಪರೀಕ್ಷೆಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಾಜರಾಗಲು ನಿರ್ಧರಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲು ಮಧ್ಯಂತರ ನಿರ್ದೇಶನದ ಅಗತ್ಯವಿದೆ ಈ ಹಿನ್ನೆಲೆ ವಿಚಾರಣೆ ಆರಂಭಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಡಿವೈ ಚಂದ್ರಚೂಡ್, ಈ ಬಗ್ಗೆ ರಿಜಿಸ್ಟ್ರಾರ್ ನಲ್ಲಿ ಪ್ರಸ್ತಾಪಿಸುವಂತೆ ಸೂಚನೆ ನೀಡಿದರು ಮತ್ತು ಶೀಘ್ರದಲ್ಲಿ ತ್ರಿಸದಸ್ಯ ಪೀಠ ರಚಿಸಿ ವಿಚಾರಣೆ ಆರಂಭಿಸುವುದಾಗಿ ಭರವಸೆ ನೀಡಿದರು.