LATEST NEWS
ಹಿಜಬ್ ವಿವಾದ – ವಿಧ್ಯಾರ್ಥಿನಿ ಸ್ಕರ್ಟ್, ಮಿಡಿಸ್, ಏನು ಬೇಕಾದರೂ ಧರಿಸಿ ಬರಬಹುದೇ..?

ನವದೆಹಲಿ ಸೆಪ್ಟೆಂಬರ್ 06: ಉಡುಪಿ ಜಿಲ್ಲೆಯಲ್ಲಿ ಪ್ರಾರಂಭವಾದ ಹಿಜಬ್ ವಿವಾದ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು.
ಈ ಸಂದರ್ಭ ನ್ಯಾಯಾಧೀಶರು, ಸಮವಸ್ತ್ರ ನೀತಿಯಲ್ಲಿ ರಾಜ್ಯ ಸರ್ಕಾರದ ತಪ್ಪೇನಿದೆ?. ಶಿಕ್ಷಣ ಸಂಸ್ಥೆಯು ನಿಯಮವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ನೀವು ಹೇಳುತ್ತೀರಿ. ಆದರೆ ಡ್ರೆಸ್ ಕೋಡ್ ಅನ್ನು ನಿರ್ಧರಿಸುವ ನಿಯಮ ಇಲ್ಲದಿದ್ದರೆ ರಾಜ್ಯದ ಕಥೆ ಏನು?, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮಿಚ್ಛೆಯ ಬಟ್ಟೆ ಧರಿಸಬಹುದೇ?, ವಿದ್ಯಾರ್ಥಿಯು ಸ್ಕರ್ಟ್, ಮಿಡಿಸ್, ಏನು ಬೇಕಾದರೂ ಧರಿಸಿ ಬರಬಹುದೇ?, ಸಮವಸ್ತ್ರ ಮೂಲಭೂತ ಹಕ್ಕುಗಳ ಉಲ್ಲಂಘನೆ ಹೇಗಾಗುತ್ತೆ, ಶಿಕ್ಷಣದ ಹಕ್ಕು ಕಸಿದಂತೆ ಹೇಗಾಗುತ್ತದೆ? ಹೀಗೆ ಹಲವು ಪ್ರಶ್ನೆಗಳನ್ನು ಎತ್ತಿದರು.

ಅರ್ಜಿದಾರ ವಿದ್ಯಾರ್ಥಿನಿಯರ ಪರ ವಕೀಲ ರಾಜೀವ್ ದವನ್, ಹಿಜಬ್ ನಿಷೇಧ ಮಾಡಿರುವ ಹಿನ್ನೆಲೆ ಲಕ್ಷಾಂತರ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗಿದೆ. ಅವರ ಶಿಕ್ಷಣದ ಹಕ್ಕು ಕಸಿದುಕೊಂಡಂತೆ ಆಗಿದೆ. ಹಿಜಬ್ ಗೆ ಸಂಬಂಧಿಸಿ ಕೇರಳ ಮತ್ತು ಕರ್ನಾಟಕ ವಿಭಿನ್ನ ತೀರ್ಪುಗಳನ್ನು ನೀಡಿವೆ, ಒಂದು ಪರವಾಗಿದ್ದರೆ ಮತ್ತೊಂದು ವಿರುದ್ಧವಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ತೆಗೆದುಕೊಳ್ಳಲಿರುವ ನಿಲುವು ಅತ್ಯಂತ ಮಹತ್ವದ್ದೆನಿಸಿಕೊಳ್ಳಲಿದೆ ಎಂದರು. ಸದ್ಯ ವಿಚಾರಣೆ ಸೆಪ್ಟೆಂಬರ್ 7 ಕ್ಕೆ ಮುಂದೂಡಲಾಗಿದೆ.