KARNATAKA
ನಕಲಿ ನ್ಯೂಸ್ ಕ್ಲಿಪ್ ಪ್ರಕರಣ – ವಿಕ್ರಮ್ ಹೆಗ್ಡೆ ಮತ್ತು ವಸಂತ್ ಗಿಳಿಯಾರ್ ಮುಂದಿನ ವಿಚಾರಣೆಯವರೆಗೆ ಅರೆಸ್ಟ್ ಮಾಡದಂತೆ ಹೈಕೋರ್ಟ್ ಆದೇಶ
ಬೆಂಗಳೂರು ಎಪ್ರಿಲ್ 03: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಪತ್ರಿಕೆಯೊಂದರ ಫೇಕ್ ವರದಿಯನ್ನು ಹಂಚಿಕೊಂಡಿದ್ದ ಆರೋಪದ ಮೇಲೆ ಬಂಧನ ಭೀತಿಯಲ್ಲಿದ್ದ ಪೋಸ್ಟ್‌ಕಾರ್ಡ್ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗ್ಡೆ ಮತ್ತು ವಸಂತ್ ಗಿಳಿಯಾರ್ ಎಂಬವರನ್ನು ಮುಂದಿನ ವಿಚಾರಣೆಯವರೆಗೆ ಬಂಧಿಸದಂತೆ ಗುರುವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಎಪ್ರಿಲ್ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ಪತ್ರಿಕೆಯೊಂದರ ನಕಲಿ ವರದಿಯನ್ನು ಮಹೇಶ್ ವಿಕ್ರಮ್ ಹೆಗ್ಡೆ ಮತ್ತು ವಸಂತ್ ಗಿಳಿಯಾರ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು. ಈ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಹರೀಶ್ ನಾಗರಾಜು ಕಳೆದ ಏಪ್ರಿಲ್ 9ರಂದು ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವಂತಹ ನಕಲಿ ಸುದ್ದಿಯನ್ನು ಸಿದ್ಧಪಡಿಸಿ, ಜನರನ್ನು ಪ್ರಚೋದಿಸುವ ಉದ್ದೇಶದಿಂದ ಅದನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಫೋಟೊ ದುರ್ಬಳಕೆ ಮಾಡಿಕೊಂಡದ್ದಲ್ಲದೇ ಅದನ್ನು ಕೆಟ್ಟ ಮಾಹಿತಿಯೊಂದಿಗೆ ಬಳಕೆ ಮಾಡುವ ಮೂಲಕ ಅವರ ವರ್ಚಸ್ಸಿಗೆ ಹಾನಿ ಮಾಡಲಾಗಿದೆ ಎಂದು ಏಳು ಮಂದಿಯ ವಿರುದ್ಧ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದೀಗ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿ ಶ್ರೀಷಾನಂದ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. “ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಹೀಗಾಗಿ, ಅರ್ಜಿಯ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಲಾಗಿದೆ. ತುರ್ತು ಅಗತ್ಯ ಮತ್ತು ಅಪರಾಧದ ಸ್ವರೂಪ ಪರಿಗಣಿಸಿ ಅರ್ಜಿದಾರರನ್ನು ಮುಂದಿನ ವಿಚಾರಣೆಯವರೆಗೆ ಬಂಧಿಸಬಾರದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.