KARNATAKA
ಬೆಳ್ಳಂಬೆಳಿಗ್ಗೆ ಸುರಿದ ಮಳೆಗೆ ಬೆಂಗಳೂರು ತತ್ತರ….!!
ಬೆಂಗಳೂರು ಅಕ್ಟೋಬರ್ 21: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಸೂಚನೆ ಜೊತೆಗೆ ಬೆಂಗಳೂರಿನಲ್ಲಿ ಮುಂಜಾನೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿದ್ದಾರೆ. ಗುಡುಗು ಸಹಿತ ಸುರಿದ ಭಾರೀ ಮಳೆಗೆ ಬೆಂಗಳೂರಿನ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿದೆ.
ಕೆಂಗೇರಿ ಆರ್ ಆರ್ ನಗರ, ದಾಸರಹಳ್ಳಿ ಭಾಗದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು. ಅದೇ ರೀತಿ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲೂ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಇಲ್ಲಿನ ಜನ ಜಲ ದಿಗ್ಬಂಧನದಲ್ಲಿದ್ದಾರೆ. ಇಡೀ ರಸ್ತೆ ನೀರಿನಿಂದ ತುಂಬಿರುವ ಕಾರಣ ಇದೇ ರಸ್ತೆಯಲ್ಲಿರೋ ಮನೆಗಳಿಗೆ ಹೋಗುವವರು, ಬರುವವರು ಬೇರೆ ಪರ್ಯಾಯ ಮಾರ್ಗವಿಲ್ಲದೇ ಕೊಳಚೆ ನೀರಿನಲ್ಲೇ ಓಡಾಟ ಮಾಡುತ್ತಿದ್ದಾರೆ.
ಬೆಂಗಳೂರು ನಗರ ಆಯುಕ್ತರು ಬೆಂಗಳೂರಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ, ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಇಂದು ಒಂದು ದಿನದ ಮಟ್ಟಿಗೆ ಈ ಆದೇಶ ಅನ್ವಯವಾಗಲಿದ್ದು, ಭಾರಿ ಮಳೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಪ್ರಕಟಿಸಲಾಗಿದೆ.