LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೆರೆ ಪ್ರವಾಹ ಭೀತಿ ಸೃಷ್ಠಿಸಿದ ಭಾರಿ ಮಳೆ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೆರೆ ಪ್ರವಾಹ ಭೀತಿ ಸೃಷ್ಠಿಸಿದ ಭಾರಿ ಮಳೆ
ಮಂಗಳೂರು ಜೂನ್ 29: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು , ದೋಣಿ ಮೂಲಕ ಸಂಚಾರ ಮಾಡುವ ಸ್ಥಿತಿ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಎಲ್ಲಾ ತಾಲೂಕಿನ ನದಿ ಕೊಳ್ಳಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.
ರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರು ಹೊರವಲಯದ ನಂದಿನಿ ನದಿ ತುಂಬಿ ಹರಿಯುತ್ತಿದೆ. ಪಂಜ , ಕಿಲೆಂಜೂರು ಮಲ್ಲಿಗೆಯಂಗಡಿ, ಕೊಡೆತ್ತೂರು, ಕಟೀಲು ಮತ್ತಿತರ ಕಡೆಗಳಲ್ಲಿ ತಗ್ಗು ಪ್ರದೇಶ ಜಲಾವೃತ್ತಗೊಂಡಿದೆ. ಅತ್ತೂರುಬೈಲು ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ಪಕ್ಷಿಕೆರೆಯ ಪಂಜ ಉಲ್ಯ ಕೊಯಿಕುಡೆಯಲ್ಲಿಯೂ ತಗ್ಗು ಪ್ರದೇಶ ಜಲಾವೃತ್ತಗೊಂಡಿದ್ದು, ಪಂಜ ನಂದಿನಿ ನದಿ ವರೆಗೆನ ರಸ್ತೆ ಮುಳುಗಡೆಯಾಗಿದೆ.

ಜಿಲ್ಲೆಯ ಬೆಳ್ತಂಗಡಿ, ಪತ್ತೂರು ,ಸುಳ್ಯ ಬಂಟ್ವಾಳ ಭಾದ ಕೆಲ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿತ ಘಟನೆಗಳು ನಡೆದಿವೆ. ರಸ್ತೆಗಳು ಹದಗೆಟ್ಟಿದ್ದು ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿದೆ. ಕಡಲು ಪಕ್ಷುಬ್ದಗೊಂಡಿರುವ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ಸಮುದ್ರಕ್ಕೆ ಗಿಳಿಯುವುದು ಕಷ್ಟಸಾಧ್ಯವಾಗಿದೆ.
ಬಳಕುಂಜೆಯಲ್ಲಿ ಮುಗೇರ ಬೈಲು ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತ್ತಗೊಂಡಿದೆ. ಈ ಪ್ರದೇಶದಲ್ಲಿ ಸುಮಾರು 15 ಮನೆಗಳಿದ್ದು ನೀರಿನ ಮಟ್ಟ ಹೆಚ್ಚಾದರೆ ಸಂಪರ್ಕ ಕಳೆದುಕೊಳ್ಳಲಿದೆ. ಕಟೀಲಿನ ಸಮೀಪದ ಅಜಾರಿನಲ್ಲಿ ನಂದಿನಿ ನದಿಗೆ ಕಟ್ಟಲಾದ ಕಿಂಡಿ ಅಣೆಕಟ್ಟಿನಲ್ಲಿ ದೂಡ್ಡ ಮರವೊಂದು ಸಿಕ್ಕಿಹಾಕ್ಕಿಕೊಂಡಿದ್ದು ಅಣೆಕಟ್ಟಿನ ಮೇಲ್ಭಾಗದ ಮೂಲಕ ನೀರು ಹರಿಯುತ್ತಿದೆ. ಬಳಕುಂಜೆ ಹಾಗೂ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಶಾಂಭವಿ ನದಿ ಉಕ್ಕಿ ಹರಿದು ಪೆರ್ಗುಂಡಿ, ಕರಿಯತ್ತಲ ಗುಂಡಿ ಉಳೆಪಾಡಿ, ಪಟ್ಟೆ ಕ್ರಾಸ್ ಮತ್ತಿತರ ಪ್ರದೇಶದಲ್ಲಿ ತಗ್ಗು ಪ್ರದೇಶ ಜಲಾವೃತಗೊಂಡಿದೆ. ನೂರಾರು ಏಕರೆ ಕೃಷಿ ಭೂಮಿಗೆ ನಾಶವಾಗಿದೆ.