KARNATAKA
ಧಾರ್ಮಿಕ ಮುಖಂಡರು ಮೊದಲು ತಮ್ಮ ಜವಬ್ದಾರಿಯನ್ನ ಸಮರ್ಥವಾಗಿ ನಿರ್ವಹಣೆ ಮಾಡಲಿ – ಎಚ್ ಡಿಕೆ
ಬೆಂಗಳೂರು ಫೆಬ್ರವರಿ 17: ಅಯೋಧ್ಯೆ ರಾಮಮಂದಿರ ನಿರ್ಮಾಣದ ದೇಣಿಗೆ ವಿಚಾರದಲ್ಲಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಹೇಳಿಕೆಗೆ ಎಚ್ ಡಿಕೆ ಅಸಮಧಾನ ಹೊರಹಾಕಿದ್ದು, ಧಾರ್ಮಿಕ ಮುಖಂಡರಿಗೆ ರಾಜಕೀಯ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೇಣಿಗೆ ನೀಡದ ಮನೆಗಳನ್ನು ಗುರುತು ಹಾಕುತ್ತಿರುವುದು ತಪ್ಪು ಎಂದು ಎಚ್ ಡಿಕೆ ಕುಮಾರ್ ಸ್ವಾಮಿ ಹೇಳಿಕೆ ನೀಡಿದ್ದರು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಶ್ರೀ ವಿಶ್ವಪ್ರಸನ್ನ ತೀರ್ಥರು ಕುಮಾರಸ್ವಾಮಿ ಹೇಳಿಕೆ ಆಧಾರ ರಹಿತವಾಗಿದ್ದು, ಸಾಕ್ಷಿ ಇಲ್ಲದೆ ಆರೋಪ ಮಾಡಬಾರದು ಎಂದು ಹೇಳಿದ್ದರು.
ಅದಕ್ಕೆ ಇಂದು ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್ ಡಿಕೆ ನನ್ನ ಹೇಳಿಕೆಯಲ್ಲಿ ಬೇಜವಾಬ್ದಾರಿ ಗುರುತಿಸಿರುವ ಧಾರ್ಮಿಕ ಮುಖಂಡರೊಬ್ಬರು ಮೊದಲು ತಮ್ಮ ಜವಾಬ್ದಾರಿ ಅರಿಯಬೇಕು. ರಾಮನ ಭಕ್ತಿಯು ಹಣ,ಅಧಿಕಾರ,ರಾಜಕಾರಣವಾಗಿ ಪರಿವರ್ತನೆಯಾಗುವುದನ್ನು ಅವರು ತಡೆದಿದ್ದರೆ,ಅದು ಅವರ ಜವಾಬ್ದಾರಿಯ ಸಮರ್ಥ ನಿರ್ವಹಣೆ ಆಗಿರುತ್ತಿತ್ತು.ಅದು ಬಿಟ್ಟು ರಾಜಕೀಯದ ಹೇಳಿಕೆ ನೀಡುವುದು ಧಾರ್ಮಿಕ ನಾಯಕರಿಗೆ ಶೋಭೆಯಲ್ಲ. ಎಂದಿದ್ದಾರೆ.
ಇನ್ನು ರಾಮನ ಹೆಸರಿನ ಮೇಲೆ ನಡೆಯುತ್ತಿರುವ ರಾಜಕೀಯ, ಹಣದ ಕೊಳ್ಳೆ, ಅಧಿಕಾರಕ್ಕಾಗಿ ನಡೆಯುತ್ತಿರುವ ಸ್ತುತಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ. ಇವರಿಗೆ ನೆನಪಿರಲಿ, ದೇವರಿಗಾಗಿ ನಾವು ಮಾಡಿದಷ್ಟು ಪ್ರಾರ್ಥನೆ, ಪೂಜೆಗಳ ಮುಂದೆ, ಈ ನಕಲಿಗಳು ಮಾಡಿದ ‘ಅಧಿಕಾರ ರಾಮ ಜಪ’ ಕಾಲು ಭಾಗಕ್ಕೂ ಸಾಲದು” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.