KARNATAKA
ಹಾವೇರಿ : ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಂದ ಮೈದುನ..!
ಹಾವೇರಿ : ಆತನ ಅಣ್ಣ ದೂರ ದುಬೈನಲ್ಲಿ ದುಡಿಯುತ್ತಿದ್ದಾನೆ. ಈತನಿಗೂ ಕೇವಲ 35 ವರ್ಷ. ಆದರೆ, ಅದೆಂಥಾ ದ್ವೇಷವೋ.. ಅಣ್ಣನ ಹೆಂಡತಿಯನ್ನು ಕೊಚ್ಚಿ ಕೊಂದಿದ್ದಾನೆ. ಅಷ್ಟಕ್ಕೆ ಸುಮ್ಮನಾಗಲಿಲ್ಲ ಆ ಪಾಪಿ. ಬಾಳಿ ಬದುಕಬೇಕಾದ ಇಬ್ಬರು ಮುದ್ದಾದ ಮಕ್ಕಳನ್ನು ಕೂಡಾ ಕೊಚ್ಚಿ ಕೊಂದಿದ್ದಾನೆ.
ಸ್ವಂತ ಅಣ್ಣನ ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳನ್ನು ಮೈದುನ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಗೀತಾ ಹೊನ್ನೆಗೌಡ ಮರಿಗೌಡ(35), ಅಕುಲ್ (10) ಮತ್ತು ಅಂಕಿತಾ (6) ಕೊಲೆಯಾದ ದುರ್ದೈವಿಯಾಗಿದ್ದಾರೆ. ಗೀತಾರ ಪತಿ ಹೊನ್ನೆಗೌಡರ ತಮ್ಮ ಕುಮಾರಗೌಡ್ (35) ಕೊಲೆ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಗೀತಾಳ ಪತಿ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊನ್ನೇಗೌಡನ ವ್ಯವಹಾರವನ್ನೆಲ್ಲಾ ಕುಮಾರಗೌಡನೇ ನೋಡಿಕೊಳ್ಳುತ್ತಿದ್ದನಂತೆ. ಈ ಬಾರಿ ಊರಿಗೆ ಬಂದಾಗ ಹೊನ್ನೇಗೌಡ ವ್ಯವಹಾರವನ್ನು ತನ್ನ ಪತ್ನಿ ಗೀತಾಳ ಹೆಸರಿನಲ್ಲಿ ನಡೆಸುವಂತೆ ಹೇಳಿದ್ದನಂತೆ. ಇದೇ ಸಿಟ್ಟಲ್ಲಿ ಅಣ್ಣನ ಪತ್ನಿ ಮತ್ತು ಮಕ್ಕಳನ್ನು ಈತ ಕೊಲೆ ಮಾಡಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಾನಗಲ್ ಠಾಣಾ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.