Connect with us

  KARNATAKA

  ಹಾಸನದಲ್ಲಿ ಆರ್‌ಎಸ್‌ಎಸ್‌ ಮುಖಂಡ ವಿಜಯ್‌ಕುಮಾರ್ ಮೇಲೆ ಕಚೇರಿಗೆ ನುಗ್ಗಿ ಹಲ್ಲೆ..!

  ಹಾಸನ: ಹಾಸನದಲ್ಲಿ ಆರ್‌ಎಸ್‌ಎಸ್‌ ಮುಖಂಡ ಐನೆಟ್ ವಿಜಯ್‌ಕುಮಾರ್ ಮತ್ತು ಸ್ನೇಹಿತರ ಮೇಲೆ ದುಷ್ಕರ್ಮಿಗಳ ಗುಂಪೊಂದು ಶುಕ್ರವಾರ ದಾಳಿ ನಡೆಸಿದೆ.

  ವಿಜಯ್‌ಕುಮಾರ್ ಎಂದಿನಂತೆ ತನ್ನ ಕಚೇರಿಯಲ್ಲಿದ್ದಾಗ  ಏಕಾಏಕಿ ಅಂಗಡಿಗೆ ನುಗ್ಗಿರುವ 50ಕ್ಕೂ ಹೆಚ್ಚು ಜನರಿದ್ದ ದುಷ್ಕರ್ಮಿಗಳ ಗುಂಪು ಗಲಾಟೆ ಮಾಡಿ ಕಚೇರಿಯ ಗಾಜು ಮತ್ತು ಕೆಲವು ಕಂಪ್ಯೂಟರ್ ಉಪಕರಣಗಳನ್ನು ಪುಡಿ ಪುಡಿ ಮಾಡಿದೆ. ಇದೇ ಸಂದರ್ಭ ಕಚೇರಿಯ ಒಳಗೆ ಕುಳಿತಿದ್ದ ವಿಜಯ್ ಕುಮಾರ್ ಮೇಲೂ ಹಲ್ಲೆ ಮಾಡಿದೆ. ಪ್ರೀತಂಗೌಡನ ಬಗ್ಗೆ ಮಾತನಾಡುತ್ತೀಯಾ? ಎಷ್ಟೋ ಧೈರ್ಯ ನಿನಗೆ ಎಂದು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ತಕ್ಷಣ ವಿಜಯ್ ಕುಮಾರ್ ಸ್ನೇಹಿತರು ಆಗಮಿಸಿ ಹಲ್ಲೆ ಬಿಡಿಸಲು ಮುಂದಾದಾಗ ಅವರುಗಳ ಮೇಲೆಯೂ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ನಂತರ ಸ್ಥಳೀಯರು ಆಗಮಿಸಿ ದುಷ್ಕರ್ಮಿಗಳನ್ನು ಹಿಡಿಯಲು ಮುಂದಾದಾಗ ಅಲ್ಲಿಂದ ಎಲ್ಲರೂ ಪರಾರಿಯಾಗಿದ್ದಾರೆ ಎನ್ನಲಾಗಿದೆ.

  ಘಟನೆಗೆ ಮೂಲ ಕಾರಣ ಏನು?ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದ ಮೇಲೆ ಇತ್ತಿಚೆಗೆ ಸಂಸದರಾದ ಪ್ರಜ್ವಲ್ ರೇವಣ್ಣ ಅವರು ಐನೆಟ್ ವಿಜಯಕುಮಾರ್ ಮನೆಗೆ ಹೋಗಿ ಚರ್ಚೆ ಮಾಡಿದ್ದರು. ಇತ್ತ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೊತೆ ನಿಕಟ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ಗೆ ವಾರದ ಹಿಂದೆ ಗೌಪ್ಯ ಸ್ಥಳದಲ್ಲಿ ಭೇಟಿ ಮಾಡಿ ಬೆಂಬಲ ಸೂಚಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಪಕ್ಷ ವಿರೋಧಿ ಚಟುವಟಿಕೆ ಮಾಡಲಾಗುತ್ತಿದೆ ಎಂದು ಪ್ರೀತಂಗೌಡ ವಿರುದ್ದ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದರು. ಇದರಿಂದ ಕೆರಳಿದ್ದ ಪ್ರೀತಂಗೌಡ ಕೂಡಾ ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ಗೆ ಟಾಂಗ್ ಕೊಡುವ ಮೂಲಕ ಪರೋಕ್ಷವಾಗಿ ವಿಜಯ್ ಕುಮಾರ್‌ಗೂ ಎಚ್ಚರಿಕೆ ರವಾನಿಸಿದ್ದರು ಎನ್ನಲಾಗಿದೆ. ಮೈತ್ರಿಯಾದ ಬಳಿಕ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸುವ ಮೂಲಕ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ವಿಜಯ್ ಕುಮಾರ್‌ ಮೇಲೆ ದಾಳಿ ಮಾಡಿ ದ್ವೇಷದ ಮೂಲಕ ಸೇಡು ತೀರಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಸ್ಥಳೀಯರಲ್ಲಿ ಕೇಳಿಬಂದಿವೆ. ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ದುಷ್ಕರ್ಮಿಗಳ ಹುಡುಕಾಟಕ್ಕೆ 3 ತಂಡ ರಚಿಸಿ ಹೆಡಮುರಿ ಕಟ್ಟಲು ಪೊಲೀಸರು ಮುಂದಾಗಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply