Connect with us

    FILM

    ಶೀಘ್ರದಲ್ಲೇ ಸೆಟ್ಟೇರಲಿದೆ ‘ಕರಿಮಣಿ ಮಾಲೀಕ’ನ ಅಸಲಿ ಸಿನಿಮಾ..!

    ಬೆಂಗಳೂರು : 25 ವರ್ಷಗಳಷ್ಟು ಹಳೆಯ ಹಾಡು ‘ಕರಿಮಣಿ ಮಾಲೀಕ’ ಕೊಸರಿ ಮೇಲೆದ್ದಿದ್ದು ಸೋಷಿಯಲ್‌ ಮೀಡಿಯಾದಲ್ಲೀಗ ಟ್ರೆಂಡಿಂಗ್‌ನಲ್ಲಿದೆ.  ಈ ಹಾಡಿನ ಸೃಷ್ಟಿಕರ್ತರು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಅಂದಿನ ಸ್ಥಿತಿಗತಿಯನ್ನು ಮತ್ತೆ ಮೆಲುಕು ಹಾಕುತ್ತಿದ್ದಾರೆ. ಹಾಡು ಹುಟ್ಟಿದ ಕಥೆ, ಸಂಗೀತ ಮೂಡಿದ ಎಳೆಯನ್ನು ಮತ್ತೊಮ್ಮೆ ತೆರೆದಿಡುತ್ತಿದ್ದಾರೆ. ಇಲ್ಲದರ ನಡುವೆ ಇದೇ ಹಾಡಿನ ಸಾಹಿತ್ಯ ಮತ್ತು ಸದ್ಯದ ಪ್ರಸ್ತುತತೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದರೆ ಅತ್ತ ಕಡೆ  ಇದೇ ಟೈಟಲ್  ಇಟ್ಟು ಹೊಸ ಸಿನಿಮಾ ಮಾಡಲು ಸದ್ದಿಲ್ಲದೆ ಪ್ಲಾನ್ ಆಗುತ್ತಿದೆ.

    ಸ್ಯಾಂಡಲ್‌ವುಡ್‌ನಲ್ಲಿ ಹೊಸದೊಂದು ಸಿನಿಮಾ ಘೋಷಣೆ ಆಗಿದ್ದು ಆ ಸಿನಿಮಾಗೆ ‘ಕರಿಮಣಿ ಮಾಲೀಕ ನೀನಲ್ಲ’ ಅಂತಲೇ ಟೈಟಲ್ ಇಟ್ಟಿದ್ದಾರೆ.  ಈ ಹಿಂದೆ ‘ಯು ಟರ್ನ್‌ 2’ ಹೊಡೆದಿದ್ದ ಚಂದ್ರು ಓಬಯ್ಯ ಈಗ ‘ಕರಿಮಣಿ ಮಾಲೀಕ ನೀನಲ್ಲ’ ಸಿನಿಮಾ ಮಾಡಲು ಹೊರಟಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಈ ಸಾಂಗ್ ಈಗ ಸಿನಿಮಾವೊಂದಕ್ಕೆ ಶೀರ್ಷಿಕೆಯಾಗಿ ಬಳಕೆ ಆಗಿರುವುದು ವಿಶೇಷವಾಗಿದೆ.

    “ನಾನು ಈ ಹಿಂದೆ ‘ಯು ಟರ್ನ್ 2’ ಎಂಬ ಸಿನಿಮಾ ಮಾಡಿದ್ದೆ. ಬಳಿಕ ‘ರಾಮು & ರಾಮು’ ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡಿದ್ದೇನೆ. ಅದು ಸೆನ್ಸಾರ್ ಹಂತದಲ್ಲಿದೆ. ಇದರ ಜೊತೆಗೆ ‘ಪ್ಯಾಟಿ ಹುಡ್ಗಿ ಹಳ್ಳಿ ಲೈಫು’ ಎಂಬ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದೇನೆ. ಅದಿನ್ನೂ ಚಿತ್ರೀಕರಣ ಹಂತದಲ್ಲಿದೆ. ಈ ಸಿನಿಮಾಗಳ ಜೊತೆಗೆ ಈಗ ‘ಕರಿಮಣಿ ಮಾಲಿಕ ನೀನಲ್ಲ’ ಎಂಬ ಟೈಟಲ್  ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದೇನೆ. ಮೇ ತಿಂಗಳಲ್ಲಿ ಇದರ ಶೂಟಿಂಗ್ ಆರಂಭಿಸಲಿದ್ದೇನೆ” ಎನ್ನುತ್ತಾರೆ ನಿರ್ದೇಶಕ ಚಂದ್ರು ಓಬಯ್ಯ.

    ಎಳನೀರು ವ್ಯಾಪಾರ ಮಾಡುವ ಹುಡುಗ ಮತ್ತು ಹೂವು ಮಾರುವ ಹುಡುಗಿಯ ನಡುವೆ ನಡೆಯೋ ವಿಭಿನ್ನ ಪ್ರೇಮಕಥೆಯು ಈ ಚಿತ್ರದಲ್ಲಿ ಇದೆಯಂತೆ. “ನಾನು ಬರೆದ ಕಥೆಗೆ ‘ಕರಿಮಣಿ ಮಾಲಿಕ ನೀನಲ್ಲ’ ಸೂಕ್ತ ಎನಿಸಿ, ಅದನ್ನೇ ಟೈಟಲ್ ಇಟ್ಟಿದ್ದೇನೆ. 40 ದಿನಗಳ‌ ಕಾಲ‌ ಬೆಂಗಳೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದ್ದೇನೆ. ಚಿತ್ರದಲ್ಲಿರುವ ನಾಲ್ಕು ಹಾಡುಗಳಿಗೆ ನಾನೇ ಸಂಗೀತ ನಿರ್ದೇಶನ ಮಾಡುತ್ತಿದ್ದೇನೆ. ನಾಯಕಿಯಾಗಿ ರಮಿಕಾ ಸುತಾರ ಅಭಿನಯಿಸುತ್ತಿದ್ದು, ಹೀರೋ ಇನ್ನೂ ಸೆಲೆಕ್ಟ್ ಆಗಿಲ್ಲ” ಎನ್ನುತ್ತಾರೆ ನಿರ್ದೇಶಕರು.

    Share Information
    Advertisement
    Click to comment

    You must be logged in to post a comment Login

    Leave a Reply