LATEST NEWS
ನನ್ನನ್ನ ರಾಜಕೀಯ ಕಾರ್ಯಕ್ರಮಗಳಿಗೆ ಕರೆಯಬೇಡಿ – ಹರೇಕಳ ಹಾಜಬ್ಬ

ಮಂಗಳೂರು ಅಗಸ್ಟ್ 17 : ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳದೆ ಇದ್ದ ಅಕ್ಷರ ಸಂತ ಹಾಜಬ್ಬ ಅವರನ್ನು ಬಿಜೆಪಿ ತನ್ನ ಪಕ್ಷದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಆದರೆ ಹಾಜಬ್ಬ ಕಾರ್ಯಕ್ರಮಗಲ್ಲಿ ಪಾಲ್ಗೊಳ್ಳದೇ ವಾಪಾಸ್ ಆಗಿದ್ದಾರೆ.
ಭಾರತೀಯ ಜನತಾ ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದಿಂದ ಬೆಂಗಳೂರಿನಲ್ಲಿ ಆಗಸ್ಟ್ 14ರಂದು ಹಮ್ಮಿಕೊಂಡಿದ್ದ ‘ದೇಶ ವಿಭಜನೆ ಒಂದು ದುರಂತ ಕಥೆ ಸ್ಮೃತಿ ಕಾರ್ಯಕ್ರಮ’ದಲ್ಲಿ ಪಾಲ್ಗೊಳ್ಳಲು ಬಿಜೆಪಿ ನಾಯಕರೊಬ್ಬರ ಆಹ್ವಾನದ ಮೇರೆಗೆ ತೆರಳಿದ್ದೆ. ಅದು ಸ್ವಾತಂತ್ರ್ಯೋತ್ಸವದ ಸರ್ಕಾರಿ ಕಾರ್ಯಕ್ರಮ ಎಂದು ಭಾವಿಸಿ ಹೋಗಿದ್ದೆ. ಅಲ್ಲಿ ಹೋದ ಬಳಿಕ ಪಕ್ಷದ ಕಾರ್ಯಕ್ರಮ ಎಂದು ಗೊತ್ತಾಯಿತು. ನನಗೆ ಯಾವುದೇ ವಿವಾದಗಳಲ್ಲಿ ಸಿಲುಕಲು ಇಷ್ಟವಿಲ್ಲದ ಕಾರಣ ಅದರಲ್ಲಿ ಪಾಲ್ಗೊಳ್ಳದೆ ಮರಳಿದ್ದೇನೆ. ದಯವಿಟ್ಟು ಇದನ್ನು ವಿವಾದ ಮಾಡಬೇಡಿ. ನನ್ನ ಸಾಮಾಜಿಕ ಕೆಲಸದಲ್ಲಿ ಎಲ್ಲ ಪಕ್ಷದವರೂ ಸಹಾಯ ಮಾಡಿದ್ದಾರೆ’ ಎಂದು ಹಾಜಬ್ಬ ತಿಳಿಸಿದ್ದಾರೆ.

‘ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ. ನನಗೆ ರಾಜಕೀಯ ಆಕಾಂಕ್ಷೆಗಳೂ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ನನ್ನ ಊರಿನ ಬಡಮಕ್ಕಳ ಸಲುವಾಗಿ ಕೆಲಸ ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ರಾಜಕೀಯ ಕಾರ್ಯಕ್ರಮಗಳಿಗೆ ಕರೆಯಬೇಡಿ’ ಎಂದು ಮನವಿ ಮಾಡಿದ್ದಾರೆ. ‘ನನ್ನ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಎಲ್ಲ ಪಕ್ಷ, ಧರ್ಮಗಳಿಗೆ ಸೇರಿದವರೂ ನೆರವಾಗಿದ್ದಾರೆ. ಮುಂದೆಯೂ ನನಗೆ ಎಲ್ಲರ ಸಹಕಾರ ಬೇಕು. ನಾನು ಒಬ್ಬ ಸಾಮಾನ್ಯ ಮನುಷ್ಯ. ಇನ್ನು ಮುಂದೆಯೂ ಕಿತ್ತಳೆ ಹಾಜಬ್ಬನಾಗಿಯೇ ಉಳಿಯುತ್ತೇನೆ. ದಯವಿಟ್ಟು ಯಾರೂ ನನ್ನನ್ನು ತಪ್ಪು ತಿಳಿಯಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.