Connect with us

KARNATAKA

ಸರಕಾರ ಉರುಳಿಸಿದ ಬಗ್ಗೆ ಪುಸ್ತಕ ಬರೆಯುತ್ತೇನೆ ; ಎಚ್.ವಿಶ್ವನಾಥ್

ಯಡಿಯೂರಪ್ಪ ಮಾತು ತಪ್ಪಲ್ಲ ಎನ್ನುತ್ತಲೇ ತಂತ್ರಹೂಡಿದ್ರಾ ಹಳ್ಳಿಹಕ್ಕಿ ?

ಮೈಸೂರು, ಜೂನ್ 28: ಎಂಎಲ್ಸಿ ಸ್ಥಾನಕ್ಕಾಗಿ ಲಾಬಿ ನಡೆಸಿ ಮೂಲೆಗುಂಪಾಗಿರುವ ಹಿರಿಯ ಮುಖಂಡ ಎಚ್.ವಿಶ್ವನಾಥ್ ಸರಕಾರ ಉರುಳಿಸಿದ ಬಗ್ಗೆ ಪುಸ್ತಕ ಬರೆಯುವುದಾಗಿ ಮತ್ತೊಂದು ಬಾಂಬ್ ಹಾಕಿದ್ದಾರೆ. ಬಾಂಬೆಯಲ್ಲಿದ್ದುಕೊಂಡು ಕಳೆದ ಬಾರಿ ಕುಮಾರಸ್ವಾಮಿ ಸರಕಾರವನ್ನು ಉರುಳಿಸಿದ ಬಗೆಯನ್ನು ಪುಸ್ತಕದಲ್ಲಿ ಹೇಳುವುದಾಗಿ ಹೇಳಿದ್ದಾರೆ.

 


ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ನನ್ನ ಕಥೆ ಮುಗೀತು ಅಂತ ವ್ಯಂಗ್ಯವಾಡಿದವರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಅವರೆಲ್ಲ ಗ್ರಾಮ ಪಂಚಾಯಿತಿ ಮಟ್ಟದವರು. ಆದರೆ ಯಡಿಯೂರಪ್ಪ ಬಗ್ಗೆ ಗೊತ್ತು. ಅವರು ಮಾತು ತಪ್ಪಿದವರಲ್ಲ. ನನಗೆ ಎಂಎಲ್ಸಿ, ಶಾಸಕನಾಗಬೇಕೆಂಬ ಬಯಕೆ ಇಲ್ಲ. ಆದರೆ, ನನ್ನ 40 ವರ್ಷಗಳ ಅನುಭವವನ್ನು ಬಳಸಿಕೊಳ್ಳಿ ಎಂದಷ್ಟೇ ಹೇಳುತ್ತೇನೆ. ಯಡಿಯೂರಪ್ಪ ಎಂದಿಗೂ ಮಾತು ತಪ್ಪಿದ ಮಗನಂತಾಗಲಾರರು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಕುಟುಕಿದ್ದಾರೆ. ಸರಕಾರದ ಉರುಳಿಸಿದ್ದಕ್ಕೆ ಕೆಲವರು ಪಕ್ಷ ದ್ರೋಹಿ ಎಂದ್ರು. ಆದರೆ, 2006ರಲ್ಲಿ ಕುಮಾರಸ್ವಾಮಿ ಮಾಡಿದ್ದೇನು..? ಆವತ್ತು ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮಾಡಿದ್ದು ಕ್ಷಿಪ್ರಕ್ರಾಂತಿಯಂತೆ. ನಾವು ಮಾಡಿದ್ದು ಪಕ್ಷ ದ್ರೋಹ ಹೇಗಾಗುತ್ತೆ ಅಂತ ಪ್ರಶ್ನಿಸಿದ್ರು.

40 ವರ್ಷದ ಸುದೀರ್ಘ ಜೀವನದಲ್ಲಿ ಯಾವುದೇ ಪಕ್ಷ ಆದ್ರೂ ಪಕ್ಷವನ್ನು ಪ್ರೀತಿಸಿದವನು. ಆದರೆ, ಬದಿಗೆ ಸರಿಸಿದಾಗ ಪಕ್ಷದ ನಾಯಕತ್ವದ ಬಗ್ಗೆ ದಂಗೆ ಎದ್ದವನು. ಬಂಗಾರಪ್ಪ , ವೀರಪ್ಪ ಮೊಯ್ಲಿ ಕಾಲದಲ್ಲಿ ನಾವೇ ಪಕ್ಷಕ್ಕೆ ತಂದಿದ್ದ ಸಿದ್ದರಾಮಯ್ಯ ವಿರುದ್ಧ ದಂಗೆ ಎದ್ದವನು. ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ಕುಮಾರಸ್ವಾಮಿ ವಿರುದ್ಧ ದಂಗೆ ಎದ್ದು ಹೊರಬಂದಿದ್ದೇನೆ. ಇದು ಭಾವನೆ ಮತ್ತು ನಂಬಿಕೆಗಳ ಪ್ರಶ್ನೆ. ಜನತಂತ್ರ ವ್ಯವಸ್ಥೆಯಲ್ಲಿ ಭಾವನೆ ಮತ್ತು ನಂಬಿಕೆಗಳ ಮೇಲಿನ ತಲ್ಲಣವೇನು ಅನ್ನುವುದನ್ನು ಪುಸ್ತಕದಲ್ಲಿ ಬರೆಯುತ್ತೇನೆ. ಬಾಂಬೆ ಡೇಸ್ ಎಂದು ಪುಸ್ತಕಕ್ಕೆ ಹೆಸರಿಟ್ಟಿದ್ದೇನೆ. ಮೂರು ಭಾಷೆಗಳಲ್ಲಿ ಪುಸ್ತಕ ಬರಲಿದ್ದು, ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹಳ್ಳಿಹಕ್ಕಿ ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.

2006ರಲ್ಲಿ ರವಿ ಬೆಳಗೆರೆ ಕುಮಾರಸ್ವಾಮಿ, ಯಡಿಯೂರಪ್ಪ ಬಗ್ಗೆ ಬರೆದಿದ್ದಾರೆ. ಸುಮಾರು 70 ಪುಟಗಳಲ್ಲಿ ಯಾವ ಎಸ್ಟೇಟ್ ಗೆ ಹೋಗಿದ್ರು, ಎಲ್ಲವನ್ನೂ ಬರೆದಿದ್ದಾರೆ. ಇದು ಕ್ಷಿಪ್ರಕ್ರಾಂತಿ ಅಲ್ಲ, ಕಾಮರಾಜ ಮಾರ್ಗ ಅಂತ ಬರೆದಿದ್ದಾರೆ. ಈ ಬಗ್ಗೆ ಬರೆಯುವುದರಲ್ಲಿ ತಪ್ಪಿಲ್ಲ. ಬರೆಯೋದ್ರಿಂದ ಸರಕಾರಕ್ಕೆ ಏನೂ ಆಗಲ್ಲ. ಸರಕಾರ ಗಟ್ಟಿಯಾಗುತ್ತೆ ಅಂತಾ ಪರೋಕ್ಷವಾಗಿ ಯಡಿಯೂರಪ್ಪ ಸರಕಾರದ ವಿರುದ್ಧವೂ ವ್ಯಂಗ್ಯವಾಡಿದ್ದಾರೆ.  ಸಚಿವ ಸ್ಥಾನ ನೀಡುವ ಭರವಸೆಯಿಂದ ಬಿಜೆಪಿ ಸೇರಿದ್ದ ಎಚ್.ವಿಶ್ವನಾಥ್ ಈಗ ಯಾವುದೇ ಸ್ಥಾನ ಸಿಗದೆ ಅತಂತ್ರರಾಗಿದ್ದಾರೆ. ಈಗ ಪುಸ್ತಕದ ಹೆಸರಲ್ಲಿ ಬಿಜೆಪಿಯವರನ್ನೂ ಬ್ಲಾಕ್ ಮೇಲ್ ಮಾಡುತ್ತಾರೆಯೇ ಎನ್ನುವ ಕುತೂಹಲ ಉಂಟಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *